ಬೆಂಗಳೂರು: Tulu Times l ಮೊದಲ ಮದುವೆ ಕಾನೂನುಬದ್ಧವಾಗಿ ಜಾರಿಯಲ್ಲಿರುವಾಗ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾದ ಎರಡನೇ ಮದುವೆ ಕಾನೂನುಬದ್ಧವಾಗಿ ಅಮಾನ್ಯ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದರೆ, ಅಂತಹ ಅಮಾನ್ಯ ಮದುವೆಯಿಂದ ಜನಿಸಿದ ಮಗುವಿಗೆ ಕಾನೂನುಬದ್ಧ ರಕ್ಷಣೆ ಹಾಗೂ ಆಸ್ತಿಯಲ್ಲಿ ವಾರಸುದಾರಿಕೆಯ ಹಕ್ಕು ಮುಂದುವರಿಯುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದಕ್ಕೆ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಮುಸ್ಲಿಂ ವ್ಯಕ್ತಿಯೊಬ್ಬರ ಎರಡನೇ ಪತ್ನಿ ಎಂದು ಗುರುತಿಸಬೇಕೆಂದು ಹಾಗೂ ಆಸ್ತಿ ಹಂಚಿಕೆ ಪ್ರಕರಣದಲ್ಲಿ ತನ್ನನ್ನೂ ಕಾನೂನುಬದ್ಧ ವಾರಸುದಾರಳಾಗಿ ಸೇರಿಸಬೇಕೆಂದು ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ಹೊರಬಿದ್ದಿದೆ.

ಪ್ರಕರಣದ ವಿವರಗಳ ಪ್ರಕಾರ, ಮಹಿಳೆ 2008ರಲ್ಲಿ ಮುಸ್ಲಿಂ ವ್ಯಕ್ತಿಯನ್ನು ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದರು. ದಂಪತಿಗೆ ಬಳಿಕ ಪುತ್ರಿಯೂ ಜನಿಸಿದ್ದಳು. ಆದರೆ, ಆ ವ್ಯಕ್ತಿಯ ಮೊದಲ ಪತ್ನಿಯೊಂದಿಗಿನ ವಿವಾಹವು ಕಾನೂನುಬದ್ಧವಾಗಿ ವಿಚ್ಛೇದನಗೊಂಡಿರಲಿಲ್ಲ. 2024ರಲ್ಲಿ ಆ ವ್ಯಕ್ತಿ ಮೃತಪಟ್ಟ ಬಳಿಕ ಅವರ ಸಹೋದರರು ದಾಖಲಿಸಿದ್ದ ಆಸ್ತಿ ಹಂಚಿಕೆ ಪ್ರಕರಣದಲ್ಲಿ ಮಹಿಳೆ ಹಾಗೂ ಪುತ್ರಿ ತಮ್ಮನ್ನು ವಾರಸುದಾರರಾಗಿ ಸೇರಿಸಬೇಕೆಂದು ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ, ಮಹಿಳೆಯನ್ನು ಕಾನೂನುಬದ್ಧ ಪತ್ನಿಯಾಗಿ ಪರಿಗಣಿಸಲು ನಿರಾಕರಿಸಿತ್ತು. ಆದರೆ, ಪುತ್ರಿಯನ್ನು ಕಾನೂನುಬದ್ಧ ವಾರಸುದಾರಳಾಗಿ ಪ್ರಕರಣಕ್ಕೆ ಸೇರಿಸಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಜುಲೈ 15ರಂದು ತೀರ್ಪು ನೀಡಿದ ಹೈಕೋರ್ಟ್, ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಮೊದಲ ವಿವಾಹ ಅಸ್ತಿತ್ವದಲ್ಲಿರುವಾಗ ವಿಶೇಷ ವಿವಾಹ ಕಾಯ್ದೆಯಡಿ ನಡೆದ ಎರಡನೇ ವಿವಾಹ ಅಮಾನ್ಯವಾಗಿರುವುದರಿಂದ, ಮಹಿಳೆಗೆ ಕಾನೂನುಬದ್ಧ ಪತ್ನಿಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯವು, ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಬಹುಪತ್ನಿತ್ವಕ್ಕೆ ಅವಕಾಶವಿದ್ದರೂ, ಸ್ವಯಂಪ್ರೇರಿತವಾಗಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗುವವರು ಆ ಕಾಯ್ದೆಯ ಎಲ್ಲ ನಿಯಮಗಳಿಗೆ ಒಳಪಡುತ್ತಾರೆ ಎಂದು ಸ್ಪಷ್ಟಪಡಿಸಿದೆ. ಇಂತಹ ಸಂದರ್ಭಗಳಲ್ಲಿ ವೈಯಕ್ತಿಕ ಧಾರ್ಮಿಕ ಕಾನೂನುಗಳಿಗಿಂತ ವಿಶೇಷ ವಿವಾಹ ಕಾಯ್ದೆಯ ನಿಯಮಗಳೇ ಅನ್ವಯಿಸುತ್ತವೆ ಎಂದು ತಿಳಿಸಿದೆ. ಅದೇ ವೇಳೆ, ಅಮಾನ್ಯ ವಿವಾಹದಿಂದ ಜನಿಸಿದ ಮಕ್ಕಳ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೈಕೋರ್ಟ್ ಒತ್ತಿ ಹೇಳಿದೆ. ಅಂತಹ ಮಕ್ಕಳು ಕಾನೂನುಬದ್ಧ ವಾರಸುದಾರರಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಮತ್ತು ಆಸ್ತಿ ಸಂಬಂಧಿತ ವ್ಯಾಜ್ಯಗಳಲ್ಲಿ ಭಾಗಿಯಾಗಲು ಸಂಪೂರ್ಣ ಅರ್ಹರು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
A second marriage has no legal validity under the Special Marriage Act – ತುಳುಟೈಮ್ಸ್
ಇದನ್ನೂ ಓದಿ :ಎಐ ಮೂಲಕ ನಿಖರ ಕ್ಯಾನ್ಸರ್ ಚಿಕಿತ್ಸೆ; ಮಣಿಪಾಲ್ ಆಸ್ಪತ್ರೆಯ ಮತ್ತೊಂದು ಐತಿಹಾಸಿಕ ಸಾಧನೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w











