ಬೆಂಗಳೂರು: Tulu Times l ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ವಹಿಸಿಕೊಂಡ ಕೆಲವೇ ಗಂಟೆಗಳಲ್ಲೇ ಕರ್ನಾಟಕದ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಬೆಂಗಳೂರಿನ ಜಯನಗರ ಆಸ್ಪತ್ರೆಗೆ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಮಧ್ಯರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಸಿಬ್ಬಂದಿಯ ಹಾಜರಾತಿ, ಆಸ್ಪತ್ರೆಯ ಸ್ವಚ್ಛತೆ, ರೋಗಿಗಳ ಆರೈಕೆ ಸೇವೆಗಳು ಹಾಗೂ ತುರ್ತು ಚಿಕಿತ್ಸಾ ವಿಭಾಗವನ್ನು ಪರಿಶೀಲಿಸಿದರು. ಅಲ್ಲದೆ ರೋಗಿಗಳು ಮತ್ತು ಅವರ ಸಂಬಂಧಿಕರೊಂದಿಗೆ ಮಾತನಾಡಿ ಆಸ್ಪತ್ರೆಯಲ್ಲಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ಪರಿಶೀಲನೆ ವೇಳೆ ಹಾಜರಾತಿ ದಾಖಲಾತಿ ಪುಸ್ತಕವನ್ನು ಪರಿಶೀಲಿಸಿದ ಸಚಿವರು ರಾತ್ರಿ ಪಾಳಿಗೆ ನಿಯೋಜಿತರಾಗಿದ್ದ ವೈದ್ಯರ ಹಾಜರಾತಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಆಸ್ಪತ್ರೆ ಆವರಣದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ನೆಲದ ಮೇಲೆ ಕುಳಿತಿರುವುದನ್ನು ಗಮನಿಸಿದ ಸಚಿವ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸಿದ ಅವರು, ಇಂತಹ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪರಿಶೀಲನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆಸ್ಪತ್ರೆಯ ನೈಜ ಪರಿಸ್ಥಿತಿ ತಿಳಿದುಕೊಳ್ಳಲು ನಾನು ಭೇಟಿ ನೀಡಿದ್ದೆ. ವಿವಿಧ ವಿಭಾಗಗಳನ್ನು ಪರಿಶೀಲಿಸಿದ್ದು, ಕೆಲವು ಲೋಪಗಳು ಕಂಡುಬಂದಿವೆ. ರಾತ್ರಿ ಕರ್ತವ್ಯದಲ್ಲಿರಬೇಕಿದ್ದ ಇಬ್ಬರು ವೈದ್ಯರು ಗೈರಾಗಿದ್ದರು. ಅವರಿಗೆ ಎಚ್ಚರಿಕೆ ನೀಡಲಾಗುವುದು ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಸೂಚಿಸಲಾಗುವುದು, ಎಂದು ಹೇಳಿದರು.
ಪರಿಶೀಲನೆ ವೇಳೆ ಕಂಡುಬಂದ ಕೊರತೆಗಳ ಕುರಿತು ಸಮಗ್ರ ವರದಿ ಪಡೆದು, ಆಸ್ಪತ್ರೆಯ ಸೇವೆಗಳನ್ನು ಮತ್ತಷ್ಟು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಆರೋಗ್ಯ ಖಾತೆ ವಹಿಸಿಕೊಂಡ ತಕ್ಷಣವೇ ಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿಯನ್ನು ಪರಿಶೀಲಿಸಿರುವ ಸಚಿವರ ಕ್ರಮ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಸೌಲಭ್ಯ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.
Health Minister U.T. Khader inspects Jayanagar Hospital – ತುಳು ಟೈಮ್ಸ್
ಇದನ್ನೂ ಓದಿ : ಅಣ್ಣಾಮಲೈ ರಾಜೀನಾಮೆ, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/xI868u7lWtY?si=TnTSgodIblwcMQKB











