ಕೋರ್ಟ್ : Tulu Times l ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಯುವತಿಗೆ ಪೊಲೀಸ್ ರಕ್ಷಣೆ ನೀಡುವಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಕೇರಳ ಹೈಕೋರ್ಟ್ ಶುಕ್ರವಾರ ಹಿಂಪಡೆದಿದೆ. ಯುವತಿಯ ಪತ್ತೆಯೇ ಸಾಧ್ಯವಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಹಿಂದಿನ ಆದೇಶವನ್ನು ರದ್ದುಗೊಳಿಸಿದರು.

ಯುವತಿಯ ಪರ ವಕೀಲ ಪಿ.ಎಸ್. ಅನಿಶಾದ್ ಅವರ ಪ್ರಕಾರ, ನ್ಯಾಯಾಲಯದ ಆದೇಶ ಜಾರಿಗೆ ಪೊಲೀಸರು ಮುಂದಾದಾಗ ಯುವತಿಯಿರುವ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಯುವತಿ ಪೊಲೀಸ್ ರಕ್ಷಣೆ ಕೋರಿ ಸಂಪರ್ಕಿಸಿದರೆ ಅಗತ್ಯ ಭದ್ರತೆ ಒದಗಿಸಬೇಕು ಎಂದು ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಲಾಗಿದೆ.
ಯುವತಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿ, ಕೇರಳ ಸರ್ಕಾರ ಹಾಗೂ ಎರ್ನಾಕುಳಂ ಸೆಂಟ್ರಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿರುದ್ಧ ಪೊಲೀಸ್ ರಕ್ಷಣೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ, ಯುವತಿಯ ಪತಿ ಫರ್ಮಾನ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ತಂದೆ ಆಕೆ ಅಪ್ರಾಪ್ತೆ ಎಂದು ದೂರು ನೀಡಿರುವ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ–2006 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ಯುವತಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೇಶಾದ್ಯಂತ ಗಮನ ಸೆಳೆದಿತ್ತು. ಬಳಿಕ ಕುಟುಂಬದ ವಿರೋಧದ ನಡುವೆಯೇ ಕೇರಳದಲ್ಲಿ ಫರ್ಮಾನ್ ಅವರನ್ನು ವಿವಾಹವಾಗಿದ್ದರು. ನಂತರ ಯುವತಿಯ ಕುಟುಂಬ, ಆಕೆ ಅಪ್ರಾಪ್ತೆ ಎಂದು ಆರೋಪಿಸಿ ಕಾನೂನು ಹೋರಾಟ ಆರಂಭಿಸಿತ್ತು. ಇದೀಗ ಕೇರಳ ಕೋರ್ಟ್ ಹೊರಡಿಸಿದ ಆದೇಶವನ್ನು ಹಿಂಪಡೆದಿರುವುದಾಗಿ ವರದಿಯಾಗಿದೆ.
New twist in the case of the viral young woman from the Kumbh Mela; protection order revoked – ತುಳುಟೈಮ್ಸ್
ಇದನ್ನೂ ಓದಿ :ಬಹು ವೋಟರ್ ಐಡಿ ಪ್ರಕರಣ: ನಟ ಪ್ರಕಾಶ್ ರಾಜ್‌ಗೆ ಜಾಮೀನು
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/cALYARNRG54











