ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬ್ರೇಕಪ್ ಮಾಡಿಸಿದರೆ ತಿಂಗಳಿಗೆ ₹2.8 ಲಕ್ಷ ಸಂಬಳ : ವೈರಲ್ ಆಗಿದೆ ಈ ವಿಚಿತ್ರ ಜಾಬ್

ವೈರಲ್ : Tulu Times l ಇದುವರೆಗೆ ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು, ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿದಂತೆ ವಿವಿಧ ವೃತ್ತಿಗಳ ಬಗ್ಗೆ ಕೇಳಿರಬಹುದು. ಆದರೆ, ಬ್ರೇಕಪ್ ಮಾಡಿಸುವುದೇ ಉದ್ಯೋಗ ಎಂದು ಕೇಳಿದರೆ ಅಚ್ಚರಿಯಾಗುವುದು ಸಹಜ. ಇದೀಗ ಜನಪ್ರಿಯ ಡೇಟಿಂಗ್ ವೇದಿಕೆ ಡೇಟಿಂಗ್.ಕಾಮ್ ಇಂತಹದ್ದೇ ಒಂದು ವಿನೂತನ ಉದ್ಯೋಗವನ್ನು ಘೋಷಿಸಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕಂಪೆನಿಯು ತನ್ನ ಮೊದಲ ‘ಚೀಫ್ ಬ್ರೇಕಪ್ ಆಫೀಸರ್’ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಿಗೆ 3,000 ಅಮೆರಿಕನ್ ಡಾಲರ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹2.8 ಲಕ್ಷ ಸಂಬಳ ನೀಡಲಾಗುತ್ತದೆ. ಇದು ಅರೆಕಾಲಿಕ ಹುದ್ದೆಯಾಗಿದ್ದು, ವಾರದಲ್ಲಿ ಕೆಲವೇ ಗಂಟೆಗಳ ಕೆಲಸವಿದ್ದರೂ ಸಂಬಳ ಮಾತ್ರ ಆಕರ್ಷಕವಾಗಿದೆ.

ಈ ಹುದ್ದೆಯಲ್ಲಿರುವ ವ್ಯಕ್ತಿಯ ಮುಖ್ಯ ಜವಾಬ್ದಾರಿ, ಸಂಬಂಧವನ್ನು ಮುರಿಯಲು ನಿರ್ಧರಿಸಿರುವವರ ಪರವಾಗಿ ಅವರ ಸಂಗಾತಿಯೊಂದಿಗೆ ಮಾತನಾಡಿ ಬ್ರೇಕಪ್ ವಿಷಯವನ್ನು ಗೌರವಯುತವಾಗಿ ತಿಳಿಸುವುದು. ಪ್ರತಿಯೊಂದು ಸಂಬಂಧದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಯಾವ ರೀತಿಯ ಮಾತುಗಳನ್ನು ಬಳಸಬೇಕು, ಯಾವ ಧಾಟಿಯಲ್ಲಿ ಮಾತನಾಡಬೇಕು ಮತ್ತು ಹೇಗೆ ನೋವು ಕಡಿಮೆ ಮಾಡುವ ರೀತಿಯಲ್ಲಿ ಸಂಭಾಷಣೆ ನಡೆಸಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ಇದರ ಜೊತೆಗೆ, ಪ್ರತಿಯೊಂದು ಪ್ರಕರಣವನ್ನು ಪರಿಶೀಲಿಸಿ ಅದು ‘Easy Exit’, ‘Complicated’ ಅಥವಾ ‘Complete Disaster’ ಎಂಬ ಮೂರು ವಿಭಾಗಗಳಲ್ಲಿ ವರ್ಗೀಕರಿಸುವ ಜವಾಬ್ದಾರಿಯೂ ಇರುತ್ತದೆ. ಈ ಹುದ್ದೆಗೆ ಕೆಲವು ವಿಶೇಷ ಅರ್ಹತೆಗಳನ್ನು ಕಂಪನಿ ನಿಗದಿಪಡಿಸಿದೆ. ಅಭ್ಯರ್ಥಿಗಳು ಕನಿಷ್ಠ ಮೂರು ಬ್ರೇಕಪ್ ಅನುಭವ ಹೊಂದಿರಬೇಕು. ಜೊತೆಗೆ, ಸ್ನೇಹಿತರ ವಲಯದಲ್ಲಿ ಸಂಬಂಧಗಳ ಕುರಿತು ಉತ್ತಮ ಸಲಹೆ ನೀಡುವ ವ್ಯಕ್ತಿಯಾಗಿರಬೇಕು.

ಆಧುನಿಕ ಸಂಬಂಧಗಳಾದ ಕಮಿಟೆಡ್ ರಿಲೇಶನ್ಶಿಪ್, ಸಿಚ್ಯುವೇಶನ್ಶಿಪ್ ಮತ್ತು ಇಟ್ಸ್ ಕಾಂಪ್ಲಿಕೇಟೆಡ್ ಸಂಬಂಧಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಂಡಿರಬೇಕು. ಭಾವನಾತ್ಮಕ ಸಂದರ್ಭಗಳಲ್ಲಿಯೂ ಶಾಂತವಾಗಿ ಹಾಗೂ ಪ್ರಬುದ್ಧವಾಗಿ ಮಾತನಾಡುವ ಸಾಮರ್ಥ್ಯ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಅಭ್ಯರ್ಥಿಗಳು ತಮ್ಮ ಜೀವನದಲ್ಲಿ ನಡೆದ ಅತ್ಯುತ್ತಮ ಬ್ರೇಕಪ್ ಅನುಭವವನ್ನು ವಿವರಿಸಬೇಕು. ಸಂಬಂಧವನ್ನು ಹೇಗೆ ಕೊನೆಗೊಳಿಸಿದರು, ಏನು ಮಾತನಾಡಿದರು, ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದರು ಎಂಬುದನ್ನು ವಿವರಿಸುವುದರ ಜೊತೆಗೆ, ಈ ಹುದ್ದೆಗೆ ತಾವು ಏಕೆ ಸೂಕ್ತರು ಎಂಬುದನ್ನು ತಿಳಿಸುವ ಮೋಟಿವೇಷನ್ ಲೆಟರ್ ಅನ್ನು ಕೂಡ ಸಲ್ಲಿಸಬೇಕು.

ಡೇಟಿಂಗ್.ಕಾಂ ಪ್ರಕಾರ, ಅನೇಕರು ಸಂಬಂಧವನ್ನು ಮುರಿಯಬೇಕಾದ ಸಂದರ್ಭದಲ್ಲೂ ಸರಿಯಾದ ರೀತಿಯಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಇದರಿಂದ ಇಬ್ಬರಿಗೂ ಅನಗತ್ಯ ಮಾನಸಿಕ ನೋವು ಉಂಟಾಗುತ್ತದೆ. ಈ ಕಾರಣದಿಂದಲೇ ಪ್ರಾಮಾಣಿಕತೆ, ಗೌರವ ಮತ್ತು ಸಂವೇದನಾಶೀಲತೆಯೊಂದಿಗೆ ಬ್ರೇಕಪ್ ಪ್ರಕ್ರಿಯೆಯನ್ನು ನಡೆಸಲು ಸಹಾಯ ಮಾಡುವ ಉದ್ದೇಶದಿಂದ ಈ ಹುದ್ದೆಯನ್ನು ಸೃಷ್ಟಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಉದ್ಯೋಗದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಕೆಲವರು ಇದನ್ನು ವಿನೂತನ ಕಲ್ಪನೆ ಎಂದು ಹೊಗಳಿದ್ದರೆ, ಇನ್ನೂ ಕೆಲವರು ಪ್ರೀತಿ ಮುರಿಯುವುದಕ್ಕೂ ಈಗ ವೃತ್ತಿಪರರು ಬೇಕೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ, ಪ್ರೀತಿ ಮತ್ತು ಸಂಬಂಧಗಳ ಜಗತ್ತಿನಲ್ಲಿ ಇದು ಹೊಸ ರೀತಿಯ ಉದ್ಯೋಗವಾಗಿ ಗಮನ ಸೆಳೆದಿದೆ.

If you break up, you get a salary of ₹2.8 lakh per month! This strange job has gone viral – ತುಳುಟೈಮ್ಸ್

ಇದನ್ನೂ ಓದಿ :ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಒಂದೇ ವೇಳಾಪಟ್ಟಿ; ಇಲ್ಲಿದೆ ಹೊಸ ಟೈಮಿಂಗ್

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/zA_oUB7Mz7E

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page