ಮಂಗಳೂರು : Tulu Times l 2026ರ ಜನವರಿಯಿಂದ ಜೂನ್ 30ರವರೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 136 ಮಂದಿ ನಾಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ 106 ಮಂದಿಯನ್ನು ಪತ್ತೆಹಚ್ಚಲಾಗಿದೆ. ಇನ್ನೂ 30 ಮಂದಿ ಪತ್ತೆಯಾಗಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ದಾಖಲಾದ ಪ್ರಕರಣಗಳ ಪ್ರಕಾರ, 64 ಪುರುಷರು ನಾಪತ್ತೆಯಾಗಿದ್ದು, ಅವರಲ್ಲಿ 44 ಮಂದಿಯನ್ನು ಪತ್ತೆಹಚ್ಚಲಾಗಿದ್ದು, 20 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. 44 ಮಹಿಳೆಯರಲ್ಲಿ 38 ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಆರು ಮಂದಿ ಇನ್ನೂ ಪತ್ತೆಯಾಗಿಲ್ಲ. ನಾಪತ್ತೆಯಾಗಿದ್ದ ಐವರು ಬಾಲಕರನ್ನೂ ಪತ್ತೆಹಚ್ಚಲಾಗಿದೆ. 23 ಬಾಲಕಿಯರಲ್ಲಿ 19 ಮಂದಿಯನ್ನು ಪತ್ತೆಹಚ್ಚಲಾಗಿದ್ದು, ನಾಲ್ವರು ಇನ್ನೂ ನಾಪತ್ತೆಯಾಗಿದ್ದಾರೆ.
ಪೊಲೀಸರ ತನಿಖೆ ಹಾಗೂ ಪ್ರಕರಣಗಳ ವಿಶ್ಲೇಷಣೆಯ ಪ್ರಕಾರ, ಪ್ರೇಮ ಸಂಬಂಧಗಳು, ಅಪರಿಪಕ್ವ ನಿರ್ಧಾರಗಳು, ಉದ್ಯೋಗ ಸಮಸ್ಯೆಗಳು, ವಿವಾಹೇತರ ಸಂಬಂಧಗಳು, ಕುಟುಂಬ ಕಲಹ, ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆಗಳು, ಲೈಂಗಿಕ ಶೋಷಣೆ ಹಾಗೂ ಆರೋಗ್ಯ ಸಮಸ್ಯೆಗಳು ನಾಪತ್ತೆ ಪ್ರಕರಣಗಳಿಗೆ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ನಾಪತ್ತೆಯಾಗಿರುವ ಮಹಿಳೆಯರಲ್ಲಿ ಹಲವರು ದಕ್ಷಿಣ ಕನ್ನಡ ಜಿಲ್ಲೆಯ ಹೊರಗಿನಿಂದ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದವರಾಗಿದ್ದಾರೆ. ಕಟ್ಟಡ ನಿರ್ಮಾಣ, ಗೃಹಕಾರ್ಯ ಸೇರಿದಂತೆ ವಿವಿಧ ಕೆಲಸಗಳಿಗೆ ಬಂದಿದ್ದ ಮಹಿಳೆಯರಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಬೆಳೆದ ಪರಿಚಯಗಳು ಹಾಗೂ ವಿವಾಹೇತರ ಸಂಬಂಧಗಳು ನಾಪತ್ತೆ ಪ್ರಕರಣಗಳಿಗೆ ಕಾರಣವಾಗುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ಒಂದು ಪ್ರಕರಣವನ್ನು ಉದಾಹರಣೆಯಾಗಿ ನೀಡಿರುವ ಪೊಲೀಸರು, ಬಜ್ಪೆ ಪೊಲೀಸ್ ಠಾಣೆಯಲ್ಲಿ ಪತಿ ನಾಪತ್ತೆಯಾಗಿರುವ ಕುರಿತು ಮಹಿಳೆಯೊಬ್ಬರು ದೂರು ನೀಡಿದ್ದರೆ, ಅದೇ ಸಮಯದಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಮತ್ತೊಬ್ಬರು ದೂರು ದಾಖಲಿಸಿದ್ದರು.

ತನಿಖೆಯ ವೇಳೆ, ಈ ಇಬ್ಬರ ನಡುವೆ ವಿವಾಹೇತರ ಸಂಬಂಧ ಇದ್ದು, ಇಬ್ಬರೂ ಒಟ್ಟಿಗೆ ತೆರಳಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಇಂತಹ ಪ್ರಕರಣಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದು, ನಾಪತ್ತೆ ಪ್ರಕರಣಗಳಿಗೆ ಸಾಮಾಜಿಕ ಜಾಲತಾಣಗಳ ದುರುಪಯೋಗವೂ ಒಂದು ಪ್ರಮುಖ ಕಾರಣವಾಗಿ ಪರಿಣಮಿಸಿದೆ. ನಗರ ಪೊಲೀಸ್ ಆಯುಕ್ತರ ಕಚೇರಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂವಹನ ಕಾಪಾಡಿಕೊಳ್ಳುವುದು, ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸುವುದು ಹಾಗೂ ಅನುಮಾನಾಸ್ಪದ ಸಂದರ್ಭಗಳಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯ ಎಂದು ಮನವಿ ಮಾಡಿದೆ.
Mangaluru: 136 people missing in six months; are social media to blame? – ತುಳು ಟೈಮ್ಸ್
ಇದನ್ನೂ ಓದಿ : ಒಳ್ಳೆಯವರಾಗಿದ್ದರೂ ಒಂಟಿತನ ಏಕೆ? ಸಂಶೋಧನೆ ಹೇಳುವ ಕುತೂಹಲಕಾರಿ ಸಂಗತಿ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtube.com/shorts/r9GB8S9NozQ?feature=share











