ಬ್ರೇಕಿಂಗ್ ನ್ಯೂಸ್
ಕರ್ನಾಟಕ

HIV ಸೋಂಕು ತಡೆಗೆ ಕರ್ನಾಟಕದ ಬಿಗಿ ಕ್ರಮ: ಗೌಪ್ಯ ಪರೀಕ್ಷೆಗೆ ಸರ್ಕಾರದ ಕರೆ

ಬೆಂಗಳೂರು: Tulu Times l ರಾಜ್ಯದಲ್ಲಿ ಎಚ್‌ಐವಿ ಸೋಂಕು ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ ಮೂಲಕ ‘ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ’ ಅಭಿಯಾನವನ್ನು ಆರಂಭಿಸಿದೆ. ‘ನಿಮ್ಮ ಸೋಂಕಿನ ಸ್ಥಿತಿ ತಿಳಿದುಕೊಳ್ಳಿ’ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಅಭಿಯಾನದ ಉದ್ದೇಶ, ತಮ್ಮಲ್ಲಿ ಎಚ್‌ಐವಿ ಸೋಂಕು ಇದ್ದರೂ ಅದರ ಅರಿವಿಲ್ಲದಿರುವ 56,406 ಮಂದಿಯನ್ನು ಪತ್ತೆಹಚ್ಚಿ ಚಿಕಿತ್ಸೆ ವ್ಯಾಪ್ತಿಗೆ ತರುವುದು.

ಜೂನ್ 28, 2026ರ ಮಾಹಿತಿಯಂತೆ, ಕರ್ನಾಟಕದಲ್ಲಿ 2,05,350 ಮಂದಿ ಎಚ್‌ಐವಿ ಸೋಂಕಿತರು ಆಂಟಿರೆಟ್ರೋವೈರಲ್ ಥೆರಪಿ ಪಡೆಯುತ್ತಿದ್ದು, ಔಷಧಿಗಳ ನೆರವಿನಿಂದ ಆರೋಗ್ಯಕರ ಮತ್ತು ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಈ ಅಭಿಯಾನದಲ್ಲಿ ಸ್ವಯಂಪ್ರೇರಿತ ಹಾಗೂ ಗೌಪ್ಯ ಎಚ್‌ಐವಿ ಪರೀಕ್ಷೆಗೆ ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ. ಸೋಂಕನ್ನು ಆರಂಭದಲ್ಲೇ ಪತ್ತೆಹಚ್ಚಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಆರಂಭಿಸಿದರೆ ದೀರ್ಘಕಾಲ ಆರೋಗ್ಯಕರ ಜೀವನ ನಡೆಸಬಹುದು ಎಂಬ ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಎಚ್‌ಐವಿ ಬಗ್ಗೆ ಇರುವ ಸಾಮಾಜಿಕ ಕಳಂಕವನ್ನು ನಿವಾರಿಸುವುದಕ್ಕೂ ಸರ್ಕಾರ ಒತ್ತು ನೀಡಿದೆ.

2025-26ನೇ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ 37.57 ಲಕ್ಷಕ್ಕೂ ಹೆಚ್ಚು ಜನರಿಗೆ ಎಚ್‌ಐವಿ ಪರೀಕ್ಷೆ ನಡೆಸಲಾಗಿದ್ದು, 11,322 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಗರ್ಭಿಣಿಯರಲ್ಲಿ ತಾಯಿ-ಮಗುವಿಗೆ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ 11.98 ಲಕ್ಷ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 451 ಹೊಸ ಎಚ್‌ಐವಿ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಸೋಂಕಿತರಾಗಿದ್ದ 1,009 ಗರ್ಭಿಣಿಯರು ಚಿಕಿತ್ಸೆ ಮತ್ತು ಮೇಲ್ವಿಚಾರಣೆಯಲ್ಲಿದ್ದಾರೆ.

2026-27ನೇ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ 4.11 ಲಕ್ಷ ಜನರಿಗೆ ಎಚ್‌ಐವಿ ಪರೀಕ್ಷೆ ನಡೆಸಲಾಗಿದ್ದು, 2,057 ಹೊಸ ಪ್ರಕರಣಗಳು ಪತ್ತೆಯಾಗಿವೆ. MAS ಅಭಿಯಾನದ ಭಾಗವಾಗಿ BreakFree QR ಕೋಡ್ ಪರಿಚಯಿಸಲಾಗಿದ್ದು, ಇದರ ಮೂಲಕ ಎಚ್‌ಐವಿ ಅಪಾಯದ ಮಾಹಿತಿ, ಸಲಹೆ, ಕೌನ್ಸೆಲಿಂಗ್ ಹಾಗೂ ಪರೀಕ್ಷಾ ಕೇಂದ್ರಗಳ ಮಾಹಿತಿ ಪಡೆಯಬಹುದು. ಎಲ್ಲ ವಯಸ್ಕರು ತಮ್ಮ ಎಚ್‌ಐವಿ ಸ್ಥಿತಿಯನ್ನು ಪರೀಕ್ಷೆಯ ಮೂಲಕ ತಿಳಿದುಕೊಳ್ಳಬೇಕು. ಗರ್ಭಿಣಿಯರು ಆದಷ್ಟು ಬೇಗ ಎಚ್‌ಐವಿ ಮತ್ತು ಸಿಫಿಲಿಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಲೈಂಗಿಕವಾಗಿ ಹರಡುವ ಸೋಂಕುಗಳ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಸರ್ಕಾರವು ಜಾಗೃತಿ, ಗೌಪ್ಯ ಪರೀಕ್ಷೆ, ಆರಂಭಿಕ ಪತ್ತೆ ಮತ್ತು ನಿರಂತರ ಚಿಕಿತ್ಸೆಯ ಮೂಲಕ ಎಚ್‌ಐವಿ ಸೋಂಕಿನ ಹರಡುವಿಕೆಯನ್ನು ತಗ್ಗಿಸಿ, ಸೋಂಕಿತರನ್ನು ಆರೋಗ್ಯ ಸೇವೆಗಳ ವ್ಯಾಪ್ತಿಗೆ ತರಲು ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ.

Karnataka’s stringent measures to prevent HIV infection: Government calls for confidential testing – ತುಳು ಟೈಮ್ಸ್

ಇದನ್ನೂ ಓದಿ : ತುರ್ತು ವೈದ್ಯಕೀಯ ಸೇವೆಗೆ ಹೊಸ ವೇಗ; 108ಗೆ 15 ನಿಮಿಷಗಳ ಗಡುವು

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/zL6G6JE_ZwA

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page