ಸೈಬರ್ : Tulu Times l ಇಂದಿನ ಡಿಜಿಟಲ್ ಯುಗದಲ್ಲಿ ಉಚಿತ ಸಾರ್ವಜನಿಕ ವೈ-ಫೈ ಬಳಕೆ ಸಾಮಾನ್ಯವಾಗಿದೆ. ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು ಹಾಗೂ ಕಫೆಗಳಲ್ಲಿ ಲಭ್ಯವಿರುವ ಉಚಿತ ಇಂಟರ್ನೆಟ್ ಸೇವೆಯನ್ನು ಅನೇಕರು ಬಳಸುತ್ತಾರೆ. ಆದರೆ ಇದೇ ಸೌಲಭ್ಯವನ್ನು ಸೈಬರ್ ವಂಚಕರು ತಮ್ಮ ದುಷ್ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೀಗಾಗಿ ಉಚಿತ ವೈ-ಫೈ ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

ಸೈಬರ್ ಅಪರಾಧಿಗಳು ಅಧಿಕೃತ ಸಾರ್ವಜನಿಕ ವೈ-ಫೈ ಜಾಲಗಳಂತೆಯೇ ಕಾಣುವ ನಕಲಿ ವೈ-ಫೈ ನೆಟ್‌ವರ್ಕ್‌ಗಳನ್ನು ಸೃಷ್ಟಿಸುತ್ತಾರೆ. ಕೆಲವೊಮ್ಮೆ ವೇಗವಾದ ಇಂಟರ್ನೆಟ್ ಸಿಗುತ್ತದೆ ಎಂಬ ಆಮಿಷವೊಡ್ಡುತ್ತಾರೆ. ಮತ್ತೊಮ್ಮೆ ಸಂಪರ್ಕಿಸುವ ಮೊದಲು ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸವನ್ನು ಕೇಳುವ ಮೂಲಕ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಕಲಿ ಲಾಗಿನ್ ಪುಟಗಳನ್ನು ಬಳಸಿ ಪಾಸ್‌ವರ್ಡ್ ಹಾಗೂ ಇತರ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡುವ ತಂತ್ರವನ್ನೂ ಅನುಸರಿಸುತ್ತಾರೆ.
ವಿಶೇಷವಾಗಿ ಸಾರ್ವಜನಿಕ ವೈ-ಫೈ ಬಳಸುವಾಗ ಬ್ಯಾಂಕಿಂಗ್ ಅಥವಾ ಹಣಕಾಸು ವ್ಯವಹಾರಗಳನ್ನು ನಡೆಸುವುದು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಸುರಕ್ಷಿತ ಅಥವಾ ನಕಲಿ ಜಾಲಗಳ ಮೂಲಕ ಬ್ಯಾಂಕ್ ಖಾತೆಯ ವಿವರಗಳು, UPI PIN, ವ್ಯವಹಾರಗಳ ಮಾಹಿತಿ, ಇ-ಮೇಲ್ ಪಾಸ್‌ವರ್ಡ್, ಸಾಮಾಜಿಕ ಜಾಲತಾಣಗಳ ಲಾಗಿನ್ ವಿವರಗಳು ಹಾಗೂ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ವೈಯಕ್ತಿಕ ದಾಖಲೆಗಳು ಸೈಬರ್ ವಂಚಕರ ಕೈಗೆ ಸಿಲುಕುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕ ವೈ-ಫೈಗೆ ಸಂಪರ್ಕ ಹೊಂದಿರುವಾಗ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಡಿಜಿಟಲ್ ಪಾವತಿಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಸುರಕ್ಷಿತ.
ಉಚಿತ ಇಂಟರ್ನೆಟ್ ಸೇವೆಯನ್ನು ಹೆಚ್ಚಾಗಿ ಬಳಸುವ ಯುವಜನರು ಇಂತಹ ನಕಲಿ ವೈ-ಫೈ ಜಾಲಗಳ ಬಲೆಗೆ ಸುಲಭವಾಗಿ ಬೀಳುವ ಸಾಧ್ಯತೆ ಹೆಚ್ಚು ಎಂದು ಸೈಬರ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಯಾವುದೇ ಸಾರ್ವಜನಿಕ ವೈ-ಫೈಗೆ ಸಂಪರ್ಕಿಸುವ ಮೊದಲು ಅದು ಅಧಿಕೃತ ಹಾಗೂ ವಿಶ್ವಾಸಾರ್ಹ ಜಾಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅಗತ್ಯವಿದ್ದರೆ ಸಂಬಂಧಿಸಿದ ಸಂಸ್ಥೆಯ ಸಿಬ್ಬಂದಿಯಿಂದ ವೈ-ಫೈ ಹೆಸರನ್ನು ಪರಿಶೀಲಿಸಿ ನಂತರವೇ ಸಂಪರ್ಕಿಸುವುದು ಉತ್ತಮ. ಡಿಜಿಟಲ್ ಸೌಲಭ್ಯಗಳು ನಮ್ಮ ಜೀವನವನ್ನು ಸುಲಭಗೊಳಿಸಿದರೂ, ಅವುಗಳನ್ನು ಸುರಕ್ಷಿತವಾಗಿ ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ಸ್ವಲ್ಪ ಎಚ್ಚರಿಕೆ ಮತ್ತು ಜಾಗೃತಿಯಿಂದ ಸೈಬರ್ ವಂಚನೆಯಿಂದ ನಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಬಹುದು. ಉಚಿತ ವೈ-ಫೈ ಬಳಸುವಾಗ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದು ಇಂದಿನ ಕಾಲದ ಅಗತ್ಯವಾಗಿದೆ.
Be careful before connecting to free Wi-Fi: Data thieves’ new tactic – ತುಳುಟೈಮ್ಸ್
ಇದನ್ನೂ ಓದಿ :ನವೀಕರಿಸಬಹುದಾದ ಇಂಧನದಲ್ಲಿ ಕರ್ನಾಟಕಕ್ಕೆ ಹೊಸ ಗರಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/MbYWc25CAMY?feature=share











