ಬ್ರೇಕಿಂಗ್ ನ್ಯೂಸ್
ದೇಶ

ವಿದೇಶಿ ಸರ್ವರ್‌ಗಳಲ್ಲಿ ಸಂಗ್ರಹಿತ ಭಾರತೀಯರ ಡೇಟಾ ಕಳುವು

ನವದೆಹಲಿ: Tulu Times l ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಕಳವು ಮಾಡಿ ವಿದೇಶಿ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗಿದೆ ಎಂಬ ಆರೋಪಗಳ ನಡುವೆ, ಆ ಡೇಟಾವನ್ನು ಮರುಪಡೆಯಲು ಅಥವಾ ನಾಶಪಡಿಸಲು ಪರಿಣಾಮಕಾರಿ ವ್ಯವಸ್ಥೆ ರೂಪಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸುವಂತೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿಫುಲ್‌ ಎಂ ಅವರಿದ್ದ ಪೀಠವು ಸೈಬರ್ ಭದ್ರತಾ ಸಲಹೆಗಾರ ನಿತೀಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಈ ಅರ್ಜಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ತಾಂತ್ರಿಕ ವಿಷಯವಾಗಿದ್ದು, ಕಾನೂನು ಅಂಶಗಳಿಗಿಂತ ಆಡಳಿತಾತ್ಮಕ ಹಾಗೂ ತಾಂತ್ರಿಕ ಪರಿಣಿತಿ ಅಗತ್ಯವಿದೆ ಎಂದು ಹೇಳಿದ ನ್ಯಾಯಪೀಠ, ನೇರ ಹಸ್ತಕ್ಷೇಪಕ್ಕೆ ನಿರಾಕರಿಸಿತು. ಆದರೆ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಪ್ರತಿನಿಧಿಯಾಗಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿತು.

ಅರ್ಜಿಯಲ್ಲಿ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023 ಅನ್ನು ತಕ್ಷಣ ಜಾರಿಗೆ ತಂದು, ಡೇಟಾ ಸೋರಿಕೆಗಳಿಂದ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಹಾಗೂ ವಂಚನೆ ಪ್ರಕರಣಗಳನ್ನು ತಡೆಗಟ್ಟುವಂತೆ ಮನವಿ ಮಾಡಲಾಗಿತ್ತು. ವಿಚಾರಣೆ ವೇಳೆ ಅರ್ಜಿದಾರರು ಕನಿಷ್ಠ ಐದು ವಿದೇಶಿ ದೇಶಗಳಲ್ಲಿರುವ ಸಂಸ್ಥೆಗಳು ಭಾರತೀಯರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಾಗಿ ಆರೋಪಿಸಿದರು. ಬೆರಳಚ್ಚು ಸೇರಿದಂತೆ ಸೂಕ್ಷ್ಮ ಮಾಹಿತಿಗಳನ್ನು ಬಳಸಿ ಅಂತರಾಷ್ಟ್ರೀಯ ಮಟ್ಟದ ಸೈಬರ್ ಅಪರಾಧಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರತ್ಯರ್ಪಣಾ ಒಪ್ಪಂದವಿಲ್ಲದಿದ್ದರೆ ಆರೋಪಿಗಳನ್ನು ಭಾರತಕ್ಕೆ ಕರೆತರುವುದು ಕಷ್ಟ ಎಂದು ಅಭಿಪ್ರಾಯಪಟ್ಟಿತು. ಕಳುವಾದ ಡೇಟಾವನ್ನು ಹಿಂದಕ್ಕೆ ತರಲು ಸಾಧ್ಯವಾಗದಿದ್ದರೂ, ಅದನ್ನು ಮರುಸಂರಚಿಸಿ ಸುರಕ್ಷಿತಗೊಳಿಸುವ ವ್ಯವಸ್ಥೆ ರೂಪಿಸಬಹುದು ಎಂದು ಅರ್ಜಿದಾರರು ವಾದಿಸಿದರು.

ಅರ್ಜಿಯಲ್ಲಿ ವಿದೇಶಗಳಲ್ಲಿ ಇರುವ ಕಳುವಾದ ವೈಯಕ್ತಿಕ ಮಾಹಿತಿಯನ್ನು ಮರುಪಡೆಯಲು ಅಥವಾ ನಾಶಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹಾಗೂ ಡೇಟಾ ಕಳವು ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಮನವಿ ಮಾಡಲಾಗಿತ್ತು ಎಂದು ವರದಿಯಾಗಿದೆ.

Theft of Indian data stored on foreign servers – ತುಳುಟೈಮ್ಸ್

ಇದನ್ನೂ ಓದಿ :ರಾಜ್ಯಾದ್ಯಂತ ಪೊಲೀಸ್ ಘಟಕಗಳ ತಪಾಸಣೆಗೆ ಡಿಜಿಪಿ ಸೂಚನೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=UKJlZGwccSDihoAL

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 22

You cannot copy content of this page