ದೇಶ : Tulu Times l ಕಚ್ಚಾ ತೈಲದ ಬೆಲೆ ಏರಿಕೆ, ಜಾಗತಿಕ ಅನಿಶ್ಚಿತತೆ ಹಾಗೂ ಅಮೆರಿಕನ್ ಡಾಲರ್ ಬಲಿಷ್ಠವಾಗುತ್ತಿರುವ ಪರಿಣಾಮ ಭಾರತೀಯ ರೂಪಾಯಿ ಮೌಲ್ಯವು ಸೋಮವಾರ ಮತ್ತೊಮ್ಮೆ ಭಾರೀ ಕುಸಿತ ಕಂಡಿದ್ದು, ಡಾಲರ್ ಎದುರು 96.25 ಎಂಬ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 96.19ರಲ್ಲಿ ವಹಿವಾಟು ಆರಂಭಿಸಿ, ಬಳಿಕ ಮತ್ತಷ್ಟು ಕುಸಿದು 96.25ಕ್ಕೆ ತಲುಪಿತು. ಇದು ಹಿಂದಿನ ಮುಚ್ಚುವಿಕೆ ದರಕ್ಕಿಂತ 44 ಪೈಸೆ ಇಳಿಕೆಯಾಗಿದೆ. ಶುಕ್ರವಾರವೂ ರೂಪಾಯಿ ಮೊದಲ ಬಾರಿಗೆ 96/USD ಗಡಿಯನ್ನು ದಾಟಿ, 95.81ರಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ಮುಚ್ಚಿತ್ತು.
ವಿದೇಶಿ ವಿನಿಮಯ ತಜ್ಞರ ಪ್ರಕಾರ, ಕಚ್ಚಾ ತೈಲದ ಬೆಲೆ ಏರಿಕೆ, ಬಲಿಷ್ಠ ಡಾಲರ್ ಮತ್ತು ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಉದಯೋನ್ಮುಖ ಮಾರುಕಟ್ಟೆಗಳ ಕರೆನ್ಸಿಗಳ ಮೇಲೆ ಒತ್ತಡ ತಂದಿದ್ದು, ಅದರ ಪರಿಣಾಮ ರೂಪಾಯಿ ಮೇಲೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಸಿಆರ್ ಫಾರೆಕ್ಸ್ ಅಡ್ವೈಸರ್ಸ್ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಭಾರಿ ಮಾತನಾಡಿ, ಜಾಗತಿಕ ಅನಿಶ್ಚಿತತೆ ಮತ್ತು ಕಚ್ಚಾ ತೈಲದ ಬೆಲೆ ಏರಿಕೆ ರೂಪಾಯಿಗೆ ಪ್ರಮುಖ ಅಪಾಯಗಳಾಗಿವೆ. ಆದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಮೊದಲು ಸರ್ಕಾರ ಮತ್ತು ಆರ್‌ಬಿಐ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಮಾರುಕಟ್ಟೆಗೆ ಧೈರ್ಯ ನೀಡುತ್ತಿದೆ ಎಂದು ತಿಳಿಸಿದ್ದಾರೆ.
ತಾಂತ್ರಿಕವಾಗಿ USDINRಗೆ 94.80-95.10 ಪ್ರಮುಖ ಬೆಂಬಲ ವಲಯವಾಗಿದ್ದರೆ, 96.00-96.50 ತೀವ್ರ ಪ್ರತಿರೋಧ ವಲಯವಾಗಿರಲಿದೆ ಎಂದು ಅವರು ಹೇಳಿದ್ದಾರೆ. ಇದರ ನಡುವೆ, ಇರಾನ್ ಸಂಬಂಧಿತ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಾಲರ್ ಸೂಚ್ಯಂಕ 99.32ಕ್ಕೆ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 111.26 ಡಾಲರ್ ಮಟ್ಟ ತಲುಪಿದೆ. ಫಿನ್ರೆಕ್ಸ್ ಟ್ರೆಷರಿ ಅಡ್ವೈಸರ್ಸ್ LLP ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಭನ್ಸಾಲಿ ಅವರ ಪ್ರಕಾರ, ತೈಲದ ಬೆಲೆ 111 ಡಾಲರ್ ದಾಟಿರುವುದು ರೂಪಾಯಿಗೆ ಮತ್ತಷ್ಟು ಒತ್ತಡ ತರುತ್ತಿದೆ. ವಿದೇಶಿ ಹೂಡಿಕೆದಾರರ ಹಣ ಹೊರಹೋಗುತ್ತಿರುವುದರಿಂದ ಡಾಲರ್ ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು 6 ಶೇಕಡದಿಂದ 15 ಶೇಕಡಕ್ಕೆ ಏರಿಸಿದ್ದ ಕೇಂದ್ರ ಸರ್ಕಾರ, ಇದೀಗ ಬೆಳ್ಳಿಯ ಆಮದು ಮೇಲೂ ಪರವಾನಗಿ ನಿಯಮ ಜಾರಿಗೊಳಿಸಿದೆ. ವಿದೇಶಿ ವಿನಿಮಯದ ಹೊರಹರಿವು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಯುದ್ಧ ಪರಿಸ್ಥಿತಿ ಅಂತ್ಯಗೊಂಡು ಹಾರ್ಮುಜ್ ಜಲಸಂಧಿ ಪುನರಾರಂಭವಾದರೆ ಮಾತ್ರ ಡಾಲರ್-ರೂಪಾಯಿ ಒತ್ತಡ ಕಡಿಮೆಯಾಗಬಹುದು. ಇಲ್ಲವಾದರೆ ಆರ್‌ಬಿಐ ಹೊಸ ಡಾಲರ್ ಹರಿವು ಯೋಜನೆಗಳನ್ನು ಘೋಷಿಸದಿದ್ದರೆ ಡಾಲರ್ ಎದುರು ರೂಪಾಯಿ 100ಕ್ಕೆ ತಲುಪುವ ಸಾಧ್ಯತೆಯೂ ಇದೆ ಎಂದು ಭನ್ಸಾಲಿ ಎಚ್ಚರಿಸಿದ್ದಾರೆ.
Rupee falls against US dollar; Value reached at 96.25 – ತುಳುಟೈಮ್ಸ್
ಇದನ್ನೂ ಓದಿ :ರಾಜ್ಯ ಶಿಕ್ಷಣ ನೀತಿ ವರದಿ ಪರಿಶೀಲನೆಗೆ ಉಪ ಸಮಿತಿ ರಚನೆ ; ಕರ್ನಾಟಕ ಸರ್ಕಾರ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/U2oHThjy010?si=z2IB2bm9zwG2GZRz











