ಸಿಬಿಎಸ್ಇ : Tulu Times l ಸಿಬಿಎಸ್ಇ 2026ನೇ ಸಾಲಿನ 12ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿ ಒಟ್ಟು ಉತ್ತೀರ್ಣ ಪ್ರಮಾಣ 85.20% ದಾಖಲಾಗಿದೆ. ಕಳೆದ ವರ್ಷದಿಗಿಂತ ಸುಮಾರು 3.9 ಶೇಕಡಾ ಕುಸಿತ ಕಂಡಿದೆ. ಈ ವರ್ಷ ಒಟ್ಟು 18,57,517 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಫಲಿತಾಂಶದಲ್ಲಿ ಬಾಲಕಿಯರು ಮತ್ತೊಮ್ಮೆ ಬಾಲಕರಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರ ಉತ್ತೀರ್ಣ ಪ್ರಮಾಣ 88.86% ಆಗಿದ್ದರೆ, ಬಾಲಕರದ್ದು 82.13% ಆಗಿದೆ. ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳು ಶೇ.100 ಫಲಿತಾಂಶ ಸಾಧಿಸಿರುವುದಾಗಿ ಸಿಬಿಎಸ್ಇ ತಿಳಿಸಿದೆ.
ವಿದ್ಯಾರ್ಥಿಗಳ ನಡುವೆ ಅನಾರೋಗ್ಯಕರ ಸ್ಪರ್ಧೆ ತಪ್ಪಿಸುವ ಉದ್ದೇಶದಿಂದ ಸಿಬಿಎಸ್ಇ ಈ ಬಾರಿ ಕೂಡ ಮೆರಿಟ್ ಪಟ್ಟಿಯನ್ನು ಪ್ರಕಟಿಸಿಲ್ಲ. ಆದರೆ 94,028 ವಿದ್ಯಾರ್ಥಿಗಳು (5.32%) 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದು, 17,113 ವಿದ್ಯಾರ್ಥಿಗಳು (0.97%) 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ಪ್ರಾದೇಶಿಕ ಮಟ್ಟದಲ್ಲಿ ತಿರುವನಂತಪುರಂ ಪ್ರದೇಶವು 95.62% ಉತ್ತೀರ್ಣ ಪ್ರಮಾಣದೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರ ಚೆನ್ನೈ 93.84% ಮತ್ತು ಬೆಂಗಳೂರು 93.19% ಉತ್ತೀರ್ಣ ಪ್ರಮಾಣದೊಂದಿಗೆ ಮುಂದಿನ ಸ್ಥಾನಗಳನ್ನು ಪಡೆದಿವೆ. ರಾಷ್ಟ್ರ ರಾಜಧಾನಿ ನವದೆಹಲಿಯ ಪಶ್ಚಿಮ ವಲಯದಲ್ಲಿ 92.34% ಹಾಗೂ ಪೂರ್ವ ವಲಯದಲ್ಲಿ 91.73% ಫಲಿತಾಂಶ ದಾಖಲಾಗಿದೆ.

ಸಂಸ್ಥೆಗಳ ಪೈಕಿ ಕೇಂದ್ರೀಯ ವಿದ್ಯಾಲಯದ ಶಾಲೆಗಳು 98.55% ಉತ್ತೀರ್ಣ ಪ್ರಮಾಣದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಜವಾಹಾರ್ ನವೋದಯ ಶಾಲೆಗಳು 98.47% ಫಲಿತಾಂಶ ದಾಖಲಿಸಿವೆ. ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆ ತರಲಾಗಿದ್ದು, ಸುಮಾರು 98 ಲಕ್ಷಕ್ಕೂ ಹೆಚ್ಚು ಉತ್ತರಪತ್ರಿಕೆಗಳನ್ನು ಸಂಪೂರ್ಣವಾಗಿ ಆನ್ ಸ್ಕ್ರೀನ್ ಮಾರ್ಕಿಂಗ್ ಡಿಜಿಟಲ್ ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಮಾಡಲಾಗಿದೆ. ಇದರಿಂದ ಅಂಕಗಳ ಲೆಕ್ಕಾಚಾರ ಮತ್ತು ದಾಖಲಾತಿಗಳ ದೋಷಗಳನ್ನು ತಪ್ಪಿಸಿ ಹೆಚ್ಚು ಪಾರದರ್ಶಕ ಹಾಗೂ ನಿಖರ ಫಲಿತಾಂಶ ನೀಡಲು ಸಾಧ್ಯವಾಗಿದೆ ಎಂದು ಸಿಬಿಎಸ್ಇ ತಿಳಿಸಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ಸಿಬಿಎಸ್ಇ ವೆಬ್‌ಸೈಟ್, ಡಿಜಿಲಾಕರ್ ಹಾಗೂ UMANG ಆ್ಯಪ್ ಮೂಲಕ ಪರಿಶೀಲಿಸಬಹುದು. DigiLocker ನಲ್ಲಿ ಲಭ್ಯವಾಗುವ ಡಿಜಿಟಲ್ ದಾಖಲೆಗಳು ಉನ್ನತ ಶಿಕ್ಷಣ ಪ್ರವೇಶಕ್ಕೆ ಕಾನೂನುಬದ್ಧ ಮಾನ್ಯತೆ ಹೊಂದಿರುತ್ತವೆ. ಪೂರಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗಾಗಿ ಜುಲೈ 15, 2026ರಂದು ಪರೀಕ್ಷೆ ನಡೆಯಲಿದ್ದು, ಅರ್ಜಿ ಪ್ರಕ್ರಿಯೆ ಜೂನ್ 2ರಿಂದ ಆರಂಭವಾಗಲಿದೆ.
CBSE Class 12th results pass percentage 85.20%: A decline from last year – ತುಳು ಟೈಮ್ಸ್
ಇದನ್ನೂ ಓದಿ : ಮಡಿಕೇರಿಯಿಂದ ಜಾಲ್ಸೂರು ತನಕ ಚಿತ್ರೀಕರಣಗೊಳ್ಳಲಿದೆ ‘ಕೋವಿ ಮತ್ತು ಕೊಳಲು’ ಚಿತ್ರ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=zI2lMHnxZZJbop8t











