Belthangady: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ನಡೆದಿದೆ. ದಾಳಿ ವೇಳೆ ಚಾಲಕ ಪರಾರಿಯಾಗಿದ್ದು, ಅಟೋ ರಿಕ್ಷಾ ಹಾಗೂ ಗೋ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅ.23ರ ಗುರುವಾರದಂದು ಮಧ್ಯಾಹ್ನ ಕಿಲ್ಲೂರು ರಸ್ತೆಯಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ಲಾಯಿಲ ಜಂಕ್ಷನ್ ನಲ್ಲಿ ತಡೆದು ನಿಲ್ಲಿಸಿ ಪರಿಶೀಲನೆಗೆ ಮುಂದಾಗಿದ್ದಾರೆ. ಈ ವೇಳೆ ರಿಕ್ಷಾ ಚಾಲಕ ಲಾಯಿಲ ನಿವಾಸಿ ಹಕೀಂ (27) ಪೊಲೀಸರನ್ನು ನೋಡಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಪರಿಶೀಲನೆ ವೇಳೆ ಆಟೋ ರಿಕ್ಷಾದೊಳಗಿದ್ದ 85 ಕೆ.ಜಿ ಗೋಮಾಂಸ ಮತ್ತು ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಟೋದ ಮೌಲ್ಯ 2,50,000 ಲಕ್ಷ ರೂ. ಮತ್ತು ಗೋಮಾಂಸ ವಶಪಡಿಸಿಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 12 ಕರ್ನಾಟಕ ಗೋವಧೆ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.