Puttur: ಪರಾರಿಯಾಗಲು ಯತ್ನಿಸಿದ ಅಕ್ರಮ ಗೋಸಾಗಾಟಗಾರನ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಗೋವುಗಳನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಸ್ಥಳದಲ್ಲಿ ತಲವಾರು ಹಿಡಿದು ಕಾರ್ಯಚರಣೆ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಪರ ವಿರೋಧ ವ್ಯಕ್ತವಾಗಿದ್ದು, ಎಸ್ಪಿ ಅರುಣ್ ಸ್ಪಷ್ಟನೆ ನೀಡಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಬೆಳ್ಳಿಚಡವು ಎಂಬಲ್ಲಿ ಫೈರಿಂಗ್ ನಡೆದಿತ್ತು. ಈ ವೇಳೆ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರು ತಲವಾರು ಹಿಡಿದು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುವ ಯತ್ನ ನಡೆದಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಸ್ಪಷ್ಟನೆ ನೀಡಿದ್ದಾರೆ.
ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 12 ಜಾನುವಾರುಗಳಲ್ಲಿ ಹಿಂಸಾತ್ಮಕ ರೀತಿ ಕಟ್ಟಿದ್ದರಿಂದ ಒಂದು ಜಾನುವಾರು ಸತ್ತಿತ್ತು. ಈ ವೇಳೆ, ಸ್ಥಳಕ್ಕೆ ಬಂದಿದ್ದ ಅರುಣ್ ಪುತ್ತಿಲ ಗೋವು ಸತ್ತಿದ್ದನ್ನು ಗಮನಿಸಿ ಪೊಲೀಸರ ಅನುಮತಿ ಪಡೆದು ತುರ್ತಾಗಿ ಜಾನುವಾರುಗಳನ್ನು ಐಚರ್ ವಾಹನದಿಂದ ಇಳಿಸಲು ಮುಂದಾಗಿದ್ದಾರೆ. ಇದಕ್ಕೆ ಅಲ್ಲಿದ್ದ ಸ್ಥಳೀಯರು ಸಹ ಕೈಜೋಡಿಸಿದ್ದಾರೆ. ಜಾನುವಾರಗಳ ಸಾವು ತಪ್ಪಿಸಲು ಪೊಲೀಸರ ಜೊತೆಗೂಡಿ, ವಾಹನದ ಹೊರಭಾಗದಿಂದ ಕಟ್ಟಿದ್ದ ಹಗ್ಗವನ್ನು ಕತ್ತಿಯಲ್ಲಿ ತುಂಡು ಮಾಡಿದ್ದಾರೆ.
ಅರುಣ್ ಪುತ್ತಿಲ ಕೈಯಲ್ಲಿದ್ದ ಕತ್ತಿಯನ್ನು ಸಮೀಪದ ಮನೆಯೊಂದರಿಂದ ತರಲಾಗಿತ್ತು. ಘಟನೆ ನಡೆದ ಸ್ಥಳದ ಎದುರಿನ ಮುಸ್ಲಿಂ ಕುಟುಂಬದ ಮನೆಯಿಂದ ಆ ಕತ್ತಿಯನ್ನು ತರಲಾಗಿದ್ದು, ಜಾನುವಾರುಗಳನ್ನು ರಕ್ಷಿಸಲು ಸಹಾಯವಾಗಲೆಂದು ಅವರು ತಮ್ಮ ಮನೆಯಿಂದ ಕತ್ತಿಯನ್ನು ನೀಡಿದ್ದರು.
ಪೊಲೀಸರು ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಸ್ಥಳೀಯರು ಮತ್ತು ಸಾರ್ವಜನಿಕರ ಸಹಾಯವನ್ನು ಪಡೆಯುತ್ತಾರೆ. ಉದಾಹರಣೆಗೆ ರೋಗಿಗಳನ್ನು ಸ್ಥಳಾಂತರಿಸುವುದು, ರಸ್ತೆಗಳಿಂದ ವಾಹನಗಳನ್ನು ತೆರವುಗೊಳಿಸುವುದು, ಶವಗಳನ್ನು ಸಾಗಿಸುವುದು, ಎತ್ತುಗಳನ್ನು ಇಳಿಸುವುದು ಇತ್ಯಾದಿ. ಯಾರು ಅನಧಿಕೃತ ಕೃತ್ಯ ಮಾಡುತ್ತಾರೋ, ಅವರನ್ನು ಕೇವಲ ಅಪರಾಧಿಗಳೆಂದು ಪರಿಗಣಿಸಬೇಕು. ಈವರೆಗೆ ದಾಖಲಾಗಿರುವ ಪ್ರಕರಣಗಳ ವಿಶ್ಲೇಷಣೆಯಿಂದ ನೋಡಿದರೆ, ಜಾನುವಾರು ಸಾಗಾಣಿಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ವಿವಿಧ ಧರ್ಮದವರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಆದ್ದರಿಂದ, ಯಾವುದೇ ಸಂಸ್ಥೆ ಅಥವಾ ಸಂಘಟನೆಯು ಆರೋಪಿಯು ಬೇರೆ ಧರ್ಮದವರಾದ್ದರಿಂದ ಮಾತ್ರ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದರೆ, ಅಥವಾ ತಮ್ಮ ಧರ್ಮದವರಾದ್ದರಿಂದ ಅದನ್ನು ಮುಚ್ಚಿಡುತ್ತಿದ್ದರೆ, ಜನರು ಅವರ ಉದ್ದೇಶಗಳನ್ನು ಪ್ರಶ್ನಿಸಬೇಕು. ಅವರ ಅಜೆಂಡಾಕ್ಕೆ ಬೆಂಬಲ ನೀಡಬಾರದು ಎಂದು ವಿನಂತಿಸಲಾಗಿದೆ. ಈ ಸಂಬಂಧ ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: brahMos ಕ್ಷಿಪಣಿ ಸಾಮರ್ಥ್ಯ ಮತ್ತಷ್ಟು ಹೆಚ್ಚಳ; ಹೇಗಿದೆ ಗೊತ್ತಾ ಬ್ರಹ್ಮೋಸ್ ಪವರ್?
================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











