ಬ್ರೇಕಿಂಗ್ ನ್ಯೂಸ್
ಮಂಗಳೂರು

ಮಂಗಳೂರಿಗೆ ಪ್ರತ್ಯೇಕ‌ ಪ್ರವಾಸೋದ್ಯಮ‌ ನೀತಿ ಅಳವಡಿಕೆಯಾಗುತ್ತದೆ : ಡಿಕೆಶಿ

ಮಂಗಳೂರು : Tulu Times l ಮಂಗಳೂರಿನಲ್ಲಿ ನಡೆದ ‘ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ 2026’ ರಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾ‌ರ್, ಕರಾವಳಿ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವುದಾಗಿ ತಿಳಿಸಿದರು.

ಇಲ್ಲಿ ಪ್ರಕೃತಿ ಸಂಪತ್ತಿನ ಜೊತೆಗೆ, ಈ ಭಾಗದ ಹಿರಿಯರು ದೇಶಕ್ಕೆ ಅನೇಕ ಬ್ಯಾಂಕುಗಳನ್ನು ಕೊಟ್ಟಿದ್ದಾರೆ. ಬ್ಯಾಂಕುಗಳಲ್ಲಿ ಶಿಸ್ತು ಕೊಟ್ಟ ಜನ ನೀವು. ಪ್ರಪಂಚದಾದ್ಯಂತ ಈ ಕರಾವಳಿ ಭಾಗದ ಜನ ಕೆಲಸ ಮಾಡುತ್ತಿದ್ದಾರೆ. ಇದು ಶೈಕ್ಷಣಿಕ ಕೇಂದ್ರವೂ ಆಗಿದೆ. ಇಲ್ಲಿರುವಷ್ಟು ಮೆಡಿಕಲ್‌, ಇಂಜಿನಿಯರ್, ಪಿಯುಸಿ ಕಾಲೇಜು ಬೇರೆ ಯಾವುದೇ ಜಿಲ್ಲೆಯಲ್ಲಿ ಇಲ್ಲ. ನೀವು ಹೆಚ್ಚು ಮಾನವ ಸಂಪನ್ಮೂಲವನ್ನು ತಯಾರು ಮಾಡುತ್ತಿದ್ದೀರಿ. ಆದರೂ ಈ ಭಾಗದ ಪ್ರತಿಭಾವಂತ ಜನರು ಬೆಂಗಳೂರು, ಮುಂಬೈ ಸೇರಿದಂತೆ ಪ್ರಪಂಚದ ಮೂಲೆ ಮೂಲೆಗೆ ಹೋಗುತ್ತಿದ್ದಾರೆ ಎಂದು ತಿಳಿಸಿದರು.

ಇಲ್ಲಿ ಖಾಸಗಿಯವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಸರ್ಕಾರ ಒಂದಷ್ಟು ಮೂಲಸೌಕರ್ಯಗಳನ್ನು ಒದಗಿಸಿಕೊಡುತ್ತದೆ. ಜೊತೆಗೆ ಅನುಕೂಲತೆ, ಅನಾನುಕೂಲತೆ, ಸಮಸ್ಯೆಗಳನ್ನು ಚರ್ಚೆ ನಡೆಸಬೇಕಿದೆ. ಈ ಭಾಗದ ಎಲ್ಲಾ ಶಾಸಕರ ಬಳಿ ಈ ಬಗ್ಗೆ ಮಾತನಾಡಿದ್ದೇನೆ. ಎಲ್ಲರೂ ಬಹಳ ಆಸಕ್ತಿ ತೋರಿದ್ದಾರೆ ಎಂದರು.

ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತಿನ ಪರ್ವತ. ದೈವ, ದೇವಾಲಯ, ಶಕ್ತಿದೇವತೆಗಳ ಪ್ರವಾಸಿ ಕ್ಷೇತ್ರ. ವ್ಯಾಪಾರಿಗಳ ನಿಧಿ, ಪ್ರವಾಸಿಗರ ಸ್ವರ್ಗ. ಇಷ್ಟೆಲ್ಲಾ ವಿಶೇಷತೆ ಇರುವಾಗ ಈ ಭಾಗದ ಪ್ರವಾಸೋದ್ಯಮದಲ್ಲಿ ನಾವು ಯಾಕೆ ಹಿಂದುಳಿದಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ. ಈ ಭಾಗದ ಪ್ರವಾಸೋದ್ಯಮ ನೀತಿಗೆ ಜನಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಲಹೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಭಾಗದ ಅಭಿವೃದ್ಧಿಯೇ ನಮ್ಮ ಸಂಕಲ್ಪ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಈ ಭಾಗದಲ್ಲಿ ಸುಂದರ ಸಮುದ್ರ ತೀರವಿದೆ. ಗೋವಾ ಹಾಗೂ ನಮಗೆ ಇರುವ ವ್ಯತ್ಯಾಸವೇನು? ಅಲ್ಲಿರುವ ಸೌಂದರ್ಯ ನಮ್ಮಲ್ಲೂ ಇವೆ. ಆದರೆ ಅವುಗಳನ್ನು ಬಳಸಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಏಳೆಂಟು ತಿಂಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ನೀತಿ ಬಗ್ಗೆ ಚರ್ಚೆ ಮಾಡಲಾಯಿತು. ಆಗ ಪ್ರವಾಸೋದ್ಯಮ ಅಂತಿಮ ನೀತಿಯನ್ನು ತಡೆ ಹಿಡಿಯುವಂತೆ ಹೇಳಿದೆ. ಕರಾವಳಿ ಭಾಗದಲ್ಲಿ ನಾವು ಪ್ರವಾಸೋದ್ಯಮ ನೀತಿ ರೂಪಿಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಣೆ ಮಾಡಬೇಕಾದರೆ ಇಲ್ಲಿರುವ ಅಡಚಣೆ ಹೇಗೆ ಸರಿಪಡಿಸಬಹುದು. ಕಾನೂನು ಚೌಕಟ್ಟಿನಲ್ಲಿ ನಿವಾರಣೆ ಮಾಡಿ ನೂತನ ನೀತಿ ತರಬೇಕು ಎಂದು ಹೇಳಿದೆ ಎಂದರು.

ಇದನ್ನೂ ಓದಿ :ಕೇಂದ್ರ ಸರ್ಕಾರದ ಅನುಮೋದನೆ ಬಾಕಿಯಿರುವ ಯೋಜನೆಗಳು ಯಾವುವು..?

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=O-_CZrKgsshqaDHc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 15

You cannot copy content of this page