ಬೆಂಗಳೂರು : Tulu Times | ಸರ್ಕಾರಿ ಕಚೇರಿಗಳು ಶಿಸ್ತಿನ ಸಂಕೇತವಾಗಿವೆ. ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಈ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರ ವರ್ತನೆ ಮಾತ್ರವಲ್ಲದೆ ಅವರ ಉಡುಪು ಶೈಲಿಯೂ ಮಹತ್ವ ಪಡೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಲೀವ್‌ಲೆಸ್ ಡ್ರೆಸ್, ಹರಿದ ಜೀನ್ಸ್ ಫ್ಯಾಶನ್ ಸೇರಿದಂತೆ ಅತಿಯಾದ ಆಧುನಿಕ ಉಡುಪು ಧರಿಸಿ ಕಚೇರಿಗೆ ಹಾಜರಾಗುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಉಡುಪು ನಿಯಮಗಳ ಬಗ್ಗೆ ಚರ್ಚೆ ಜೋರಾಗಿದೆ.
ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರು ಸಾರ್ವಜನಿಕ ಸೇವಕರಾಗಿರುವುದರಿಂದ, ಅವರ ಉಡುಪು ಶೈಲಿ ಕಚೇರಿಯ ಗೌರವ ಮತ್ತು ಸರ್ಕಾರದ ಪ್ರತಿಷ್ಠೆಯನ್ನು ಪ್ರತಿಬಿಂಬಿಸಬೇಕು ಎಂಬ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಕಚೇರಿಯಲ್ಲಿ ಸ್ಲೀವ್‌ಲೆಸ್ ಡ್ರೆಸ್, ಅತಿಯಾಗಿ ಕತ್ತರಿಸಿದ ಅಥವಾ ಹರಿದ ಜೀನ್ಸ್, ಅಸಂಯಮಿತ ಫ್ಯಾಷನ್ ಉಡುಪುಗಳನ್ನು ಧರಿಸುವುದನ್ನು ನಿರ್ಬಂಧಿಸುವ ನಿಯಮಗಳನ್ನು ಜಾರಿಗೆ ತರಲಾಗಿದೆ.
ರಾಜ್ಯ ಸರ್ಕಾರಿ ನೌಕರರು ಡೀಸೆಂಟ್ ಬಟ್ಟೆಗಳನ್ನು ಧರಿಸಿಕೊಂಡು ಕಚೇರಿಗೆ ಬರಬೇಕು. ಸರ್ಕಾರದ ಖ್ಯಾತಿಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಿ ಕಚೇರಿಗೆ ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಟ್ಟುನಿಟ್ಟಿನ ಸೂತ್ತೋಲೆ ಹೊರಡಿಸಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ ಈ ಸಂದೇಶವನ್ನು ಕಳುಹಿಸಿದ್ದು, ಸರ್ಕಾರಿ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗುವಾಗ ಹೇಗಿರಬೇಕು, ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಕೆಲಸಗಳನ್ನು ಪಟ್ಟಿ ಮಾಡಿದೆ.
ಸರ್ಕಾರಿ ನೌಕರರಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ ;
ಕೆಲವು ನೌಕರರು ಅಸಭ್ಯವಾಗಿ ಉಡುಗೆ ತೊಟ್ಟುಕೊಂಡು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಸಾರ್ವಜನಿಕರು ಮತ್ತು ಕೆಲವು ಸಂಸ್ಥೆಗಳಿಂದ ಇಲಾಖೆಗೆ ದೂರುಗಳು ಬಂದಿವೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾರ್ಪೊರೇಟ್ ಕಚೇರಿಗಳಂತೆ ಸರ್ಕಾರಿ ನೌಕರರಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಆದಾಗ್ಯೂ, ಕೆಲವರು ಕಾಲೇಜು ಹೋಗುವವರು ಧರಿಸುವಂತಹ ಉಡುಗೆ ತೊಡುತ್ತಾರೆ, ಇದು ಸ್ವೀಕಾರಾರ್ಹವಲ್ಲ. ಹರಿದ ಜೀನ್ಸ್, ಸ್ಲೀವ್‌ಲೆಸ್ ಡ್ರೆಸ್ ಮತ್ತು ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸ್ವಾಗತಿಸಿದ್ದಾರೆ. ಸರ್ಕಾರಿ ನೌಕರರು ಧರಿಸುವ ಉಡುಗೆ ತೊಡುಗೆ ಇತರರಿಗೆ ಮುಜುಗರ ಉಂಟುಮಾಡಬಾರದು. ಸರ್ಕಾರಿ ಕಚೇರಿಗಳಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ :ಮಲಯಾಳಂನ ಅಗ್ರಗಣ್ಯ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀನಿವಾಸನ್ ನಿಧನ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=ZnMAz2_LgUHSxqn9











