ಬೆಂಗಳೂರು: Tulu Times | ಕರ್ನಾಟಕದಲ್ಲಿ ಚಳಿ ಶುರುವಾಗಿದ್ದು, ಮೈ ನಡುಗುವ ಚಳಿಗೆ ಬಿಸಿ ಬಿಸಿ ಟೀ ಕುಡಿಯುತ್ತಾ ಜನ ಚಳಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಂತೂ ಬೆಳ್ಳಂಬೆಳಗ್ಗೆ ತುಂತುರು ಮಳೆಯ ಜೊತೆಗೆ ಮೈ ನಡುಗಿಸುವ ಚಳಿಯಿಂದ ಆಚೆ ಓಡಾಡಲು ಕಷ್ಟವಾಗುತ್ತಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ದಿತ್ವಾ ಚಂಡಮಾರುತ ಪರಿಣಾಮದಿಂದಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿನಲ್ಲಂತೂ ದಿನ ತುಂತುರು ಮಳೆಯಾಗುತ್ತಿದೆ. ಇಂದು ರಜಾ ದಿನವಾಗಿರುವುದರಿಂದ ಹಲವಾರು ಜನ ಈ ಹವಾಮಾನವನ್ನು ಎಂಜಾಯ್ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ. ಡಿಸೆಂಬರ್ 4ರವರೆಗೂ ಇದೇ ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ದಿತ್ವಾ ಚಂಡಮಾರುತದ ಪರಿಣಾಮದಿಂದಾಗಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಕೆಲವೆಡೆ ಒಂದೆರಡು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ವಿಜಯಪುರ ಹಾಗೂ ಬೀದರ್ನಲ್ಲಿ 12 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, 24 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದೆ. ಡಿಸೆಂಬರ್ 4ರ ಬಳಿಕ ರಾಜ್ಯದೆಲ್ಲೆಡೆ ಒಣಹವೆ ಮುಂದುವರೆಯಲಿದೆ. ಮುಂದಿನ ಒಂದೆರಡು ದಿನಗಳಲ್ಲಿ ಕನಿಷ್ಠ ಉಷ್ಣಾಂಶ 2 ರಿಂದ 3ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ದಿತ್ವಾ ಚಂಡಮಾರುತವು ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 10 ಕಿ.ಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿತು. ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಸಂಜೆ 5.30ಕ್ಕೆ ನೈಋತ್ಯ ಬಂಗಾಳಕೊಲ್ಲಿ ಮತ್ತು ಪಕ್ಕದ ಉತ್ತರ ಶ್ರೀಲಂಕಾ ಮತ್ತು ತಮಿಳುನಾಡು ಕರಾವಳಿಗಳ ಮೇಲೆ ಕೇಂದ್ರೀಕೃತವಾಗಿತ್ತು.
ದಿತ್ವಾ ಚಂಡಮಾರುತವು ಕಾವೇರಿ ತೀರದ ಜಿಲ್ಲೆಗಳಿಗೆ ಹಾಗೂ ರಾಮನಾಥಪುರಂನಂತಹ ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆಯನ್ನು ತಂದಿದೆ. ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ದಿತ್ವಾ ಚಂಡಮಾರುತದಿಂದ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದ ಮೃತರ ಸಂಖ್ಯೆ 153ಕ್ಕೆ ಏರಿಕೆಯಾಗಿದೆ. ಇನ್ನೂ 176 ಜನರು ಕಾಣೆಯಾಗಿದ್ದಾರೆ.
People enjoying the chilly weather..! – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











