ಸುಳ್ಯ : Tulu Times l ಸ್ವಾತಂತ್ರ್ಯೋತ್ಸವದ ಸಂಭ್ರಮದ ಜೊತೆಗೆ ಜನರ ಆರೋಗ್ಯದ ಕಾಳಜಿಗೂ ಆದ್ಯತೆ ನೀಡುವ ಉದ್ದೇಶದಿಂದ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ‘ಆರೋಗ್ಯ ಮೇಳ–2026’ ಆಯೋಜಿಸಿದೆ. ಆಗಸ್ಟ್ 15ರಿಂದ 31ರವರೆಗೆ ನಡೆಯಲಿರುವ ಈ ಆರೋಗ್ಯ ಮೇಳದಲ್ಲಿ ಸಾರ್ವಜನಿಕರಿಗೆ ವಿವಿಧ ಉಚಿತ ಹಾಗೂ ರಿಯಾಯಿತಿ ದರದ ವೈದ್ಯಕೀಯ ಸೇವೆಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಆಧುನಿಕ ಚಿಕಿತ್ಸಾ ಉಪಕರಣಗಳು, ಅನುಭವಿ ತಜ್ಞ ವೈದ್ಯರು ಹಾಗೂ ಅತ್ಯಾಧುನಿಕ ಪ್ರಯೋಗಾಲಯ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆಯನ್ನು ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಜನರಲ್ ಮೆಡಿಸಿನ್ನಿಂದ ಶಸ್ತ್ರಚಿಕಿತ್ಸೆ, ಹೆರಿಗೆ ಮತ್ತು ಸ್ತ್ರೀರೋಗ, ಎಲುಬು–ಕೀಲು, ಕಿವಿ–ಮೂಗು–ಗಂಟಲು, ಮಕ್ಕಳ ಚಿಕಿತ್ಸೆ, ನೇತ್ರ, ಚರ್ಮ, ಮನೋರೋಗ ಹಾಗೂ ಶ್ವಾಸಕೋಶ ವಿಭಾಗಗಳ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ ದೊರೆಯಲಿದೆ.
ಆರೋಗ್ಯ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಉಚಿತ ಹೃದಯ ತಪಾಸಣೆ, ಕಂಪ್ಯೂಟರೀಕೃತ ರಕ್ತ ಪರೀಕ್ಷೆ, ಎಕ್ಸ್ರೇ ಮತ್ತು ಇಸಿಜಿ ಪರೀಕ್ಷೆಗಳು ಸೇರಿವೆ. MRI ಹಾಗೂ CT ಸ್ಕ್ಯಾನ್ ಸೇರಿದಂತೆ ಹಲವು ಅಗತ್ಯ ಪರೀಕ್ಷೆಗಳನ್ನು ರಿಯಾಯಿತಿ ದರದಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಅಲರ್ಜಿ ಸಂಬಂಧಿತ ಕಾಯಿಲೆಗಳ ಪರೀಕ್ಷೆಗೂ ರಿಯಾಯಿತಿ ಸೌಲಭ್ಯವಿದೆ.

ಒಳರೋಗಿಗಳಿಗೆ ಅಗತ್ಯ ಶಸ್ತ್ರಚಿಕಿತ್ಸೆಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಲಾಗುತ್ತಿದ್ದು, ಜನರಲ್ ವಾರ್ಡ್ನಲ್ಲಿ ದಾಖಲಾಗುವವರಿಗೆ ಉಚಿತ ಹಾಸಿಗೆ, ಊಟ, ತಿಂಡಿ ಹಾಗೂ ನಿಗದಿತ ಔಷಧಗಳ ಸೌಲಭ್ಯ ಒದಗಿಸಲಾಗುತ್ತದೆ. ಮಹಿಳಾ ಒಳರೋಗಿಗಳಿಗೆ ಹೆರಿಗೆ, ಸಂತಾನಹರಣ ಚಿಕಿತ್ಸೆ, ಗರ್ಭಕೋಶದ ಕಾಯಿಲೆಗಳ ತಪಾಸಣೆ ಹಾಗೂ ಅಗತ್ಯ ಶಸ್ತ್ರಚಿಕಿತ್ಸೆಗಳಿಗೆ ವಿಶೇಷ ರಿಯಾಯಿತಿ ದೊರೆಯಲಿದೆ. ಆದರೆ ಆರೋಗ್ಯ ಮೇಳದ ವಿಶೇಷ ಸೌಲಭ್ಯಗಳು ಆಗಸ್ಟ್ 31ರವರೆಗೆ ಮಾತ್ರ ಅನ್ವಯವಾಗಲಿದ್ದು, ಒಳರೋಗಿಗಳಿಗೆ ಕನಿಷ್ಠ ಐದು ದಿನಗಳ ದಾಖಲಾತಿ ಅಗತ್ಯವಿದೆ. ಸೇವೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದರ ಜತೆಗೆ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ, ESIS, ಸ್ಟಾರ್ ಹೆಲ್ತ್ ಸೇರಿದಂತೆ ವಿವಿಧ ಆರೋಗ್ಯ ವಿಮಾ ಯೋಜನೆಗಳ ಮೂಲಕವೂ ಅರ್ಹರು ಚಿಕಿತ್ಸೆ ಪಡೆಯಬಹುದಾಗಿದೆ.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಈ ಆರೋಗ್ಯ ಮೇಳವು ಆರ್ಥಿಕವಾಗಿ ಹೊರೆಯಾಗದೆ ಅಗತ್ಯ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆಯಲು ಸಾರ್ವಜನಿಕರಿಗೆ ಉತ್ತಮ ಅವಕಾಶವಾಗಿದೆ. ಹೀಗಾಗಿ ಸುಳ್ಯ ಹಾಗೂ ಸುತ್ತಮುತ್ತಲಿನ ಜನರು ಆರೋಗ್ಯ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾಡಿದೆ.
Mega health service fair in Sullia to mark Independence Day – ತುಳುಟೈಮ್ಸ್
ಇದನ್ನೂ ಓದಿ :ಆಟಿಯ ಸೊಗಡು, ಗಮ್ಮತ್ತಿನ ಸಂಭ್ರಮ; ಸುಳ್ಯದಲ್ಲಿ ವಿಶೇಷ ಆಟಿಕೂಟ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/OI2pvxDU5y0











