ಬಂಟ್ವಾಳ: Tulu Times l ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಭೀಕರ ಘಟನೆಯಲ್ಲಿ ಯುವತಿಯೊಬ್ಬಳು ಕತ್ತಿ ದಾಳಿಗೆ ಬಲಿಯಾಗಿದ್ದಾರೆ. ಸಾರ್ವಜನಿಕರ ಎದುರೇ ನಡೆದ ಈ ಘಟನೆ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು. ಮೃತರನ್ನು ಕಕ್ಕೆಪದವು ನಿವಾಸಿ ಲಾವಣ್ಯ (25) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಲಾವಣ್ಯ ಅವರು ಕಕ್ಕೆಪದವು ಮಾರ್ಗದ ಸರ್ಕಾರಿ ಬಸ್ನಲ್ಲಿ ಕುಳಿತಿದ್ದ ವೇಳೆ, ಅವರನ್ನು ಹಿಂಬಾಲಿಸಿಕೊಂಡು ಬಂದ ಯುವಕ ಬಸ್ಗೆ ನುಗ್ಗಿದ್ದಾನೆ. ಬಳಿಕ ಅವರನ್ನು ಬಲವಂತವಾಗಿ ಬಸ್ನಿಂದ ಕೆಳಗಿಳಿಸಿ, ಸಾರ್ವಜನಿಕರ ಸಮ್ಮುಖದಲ್ಲೇ ಕತ್ತಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಲಾವಣ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಾರಿಯಾಗಿರುವ ಆರೋಪಿಯನ್ನು ಶೀಘ್ರ ಬಂಧಿಸುವ ಉದ್ದೇಶದಿಂದ ಎರಡು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು, ವಿವಿಧ ಕಡೆಗಳಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದ್ದು. ಹತ್ಯೆಗೆ ಕಾರಣವೇನು?, ಆರೋಪಿಯೊಂದಿಗೆ ಹತ್ಯೆಯಾದ ಯುವತಿಗೆ ಯಾವ ಪರಿಚಯ ಅಥವಾ ವೈಯಕ್ತಿಕ ವೈಮನಸ್ಸು ಇತ್ತೇ ಎಂಬುದು ಸೇರಿದಂತೆ ಎಲ್ಲ ಆಯಾಮಗಳಲ್ಲಿ ಆರೋಪಿಯಿಂದ ಪೊಲೀಸರು ತನಿಖೆ ನಡೆಸಬೇಕಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ ಕೊಲೆ ಮಾಡಿದ ಯುವಕ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಪುರುಷೋತ್ತಮ ಗೌಡ ಮಗ ಚೇತನ್ ಗೌಡ ಎಂಬುವುದಾಗಿ ಮಾಹಿತಿ ಲಭ್ಯವಾಗಿದೆ. ಈತ ಕೊಲೆಯಾದ ಯುವತಿಯ ದೂರದ ಸಂಬಂಧಿಯಾಗಿದ್ದು, ಯುವತಿಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎಂದು ಮಾಹಿತಿ ಲಭ್ಯವಾಗಿದೆ.
Horrific murder of a young woman at Bantwal bus stand; accused absconding, two special teams formed to arrest him. – ತುಳುಟೈಮ್ಸ್
ಇದನ್ನೂ ಓದಿ :ಮತದಾರರ ಪಟ್ಟಿ ಪರಿಷ್ಕರಣೆಗೆ ಹೆಚ್ಚುವರಿ ಸಮಯ; ಎಸ್ಐಆರ್ ವೇಳಾಪಟ್ಟಿ ಪರಿಷ್ಕರಣೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/TP-rtIPAbk0?feature=share











