ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಶಾಲೆಗಳ ಬಳಿ ಸ್ಟಿಂಗ್ ಎನರ್ಜಿ ಡ್ರಿಂಕ್ ಮಾರಾಟ ನಿಷೇಧಕ್ಕೆ ಆಗ್ರಹ

ಕರ್ನಾಟಕ : Tulu Times l ಶಾಲೆ ಮತ್ತು ಕಾಲೇಜುಗಳ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಸ್ಟಿಂಗ್ ಎನರ್ಜಿ ಡ್ರಿಂಕ್ ಸೇರಿದಂತೆ ಆರೋಗ್ಯಕ್ಕೆ ಹಾನಿಕಾರಕ ಹಾಗೂ ಮಾದಕ ಗುಣಲಕ್ಷಣ ಹೊಂದಿರುವ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಶಿಧರ್ ಕೋಸಂಬೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಜುಲೈ 3ರಂದು ಮಹಾರಾಷ್ಟ್ರ ಸರ್ಕಾರ ಶಾಲೆ ಮತ್ತು ಕಾಲೇಜುಗಳ 500 ಮೀಟರ್ ವ್ಯಾಪ್ತಿಯಲ್ಲಿ ಸ್ಟಿಂಗ್ ಎನರ್ಜಿ ಡ್ರಿಂಕ್ ಸೇರಿದಂತೆ ಕೆಲವು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿರುವ ಕ್ರಮವನ್ನು ಉಲ್ಲೇಖಿಸಿರುವ ಕೋಸಂಬೆ, ಕರ್ನಾಟಕದಲ್ಲೂ ಇದೇ ರೀತಿಯ ನಿಯಮ ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ. ಶಾಲಾ-ಕಾಲೇಜುಗಳ ಸಮೀಪ ಎನರ್ಜಿ ಡ್ರಿಂಕ್‌ಗಳು ಸುಲಭವಾಗಿ ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳು ಅವನ್ನು ಹೆಚ್ಚಾಗಿ ಖರೀದಿಸಿ ಸೇವಿಸುತ್ತಿದ್ದಾರೆ. ಇಂತಹ ಪಾನೀಯಗಳಲ್ಲಿ ಕೃತಕ ಬಣ್ಣಗಳು ಹಾಗೂ ವಿವಿಧ ರಾಸಾಯನಿಕ ಅಂಶಗಳಿದ್ದು, ಅವನ್ನು ನಿಯಮಿತವಾಗಿ ಸೇವಿಸುವುದು ಮಕ್ಕಳ ಆರೋಗ್ಯದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ ಶಾಲೆ ಮತ್ತು ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದೆ. ಈ ವ್ಯಾಪ್ತಿಯನ್ನು 500 ಮೀಟರ್‌ಗೆ ವಿಸ್ತರಿಸಿ, ಸ್ಟಿಂಗ್ ಎನರ್ಜಿ ಡ್ರಿಂಕ್ ಸೇರಿದಂತೆ ಇತರೆ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳನ್ನೂ ನಿಷೇಧಿತ ಪಟ್ಟಿಗೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಜೊತೆಗೆ, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಹಾಗೂ ವ್ಯಾಪಾರ, ಉತ್ಪಾದನೆ, ಸರಬರಾಜು ಮತ್ತು ವಿತರಣೆ ನಿಯಂತ್ರಣ) ಕಾಯ್ದೆ, 2003 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ. ಮಹಾರಾಷ್ಟ್ರದ ಮಾದರಿಯಲ್ಲೇ ಕರ್ನಾಟಕದಲ್ಲೂ ಕಠಿಣ ನಿಯಮಗಳನ್ನು ಜಾರಿಗೆ ತಂದರೆ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಸಾಧ್ಯವಾಗುವುದರ ಜೊತೆಗೆ ಶಾಲಾ-ಕಾಲೇಜುಗಳ ಸುತ್ತಮುತ್ತ ಸುರಕ್ಷಿತ ವಾತಾವರಣ ನಿರ್ಮಾಣವಾಗಲಿದೆ ಎಂದು ಶಶಿಧರ್ ಕೋಸಂಬೆ ಅಭಿಪ್ರಾಯಪಟ್ಟಿದ್ದಾರೆ.

Demand to ban the sale of Sting energy drink near schools – ತುಳು ಟೈಮ್ಸ್

ಇದನ್ನೂ ಓದಿ : ಕಾಜಲ್‌ನಿಂದ ಶಿಶುವಿನ ಕಣ್ಣಿಗೆ ಹಾನಿಯಾಗಬಹುದೇ? ಇಲ್ಲಿದೆ ವೈದ್ಯಕೀಯ ಸತ್ಯ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtube.com/shorts/TP-rtIPAbk0?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page