ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕರ್ನಾಟಕಕ್ಕೆ ಎಲ್ ನಿನೋ ಎಚ್ಚರಿಕೆ: ಕೇಂದ್ರದಿಂದ ಮುನ್ನೆಚ್ಚರಿಕೆ ಕ್ರಮಗಳಿಗೆ ಸೂಚನೆ

ನವದೆಹಲಿ: Tulu Times l ಎಲ್ ನಿನೋ (ಎಲ್ ನಿನೋ ಎಂದರೆ ಪೆಸಿಫಿಕ್ ಮಹಾಸಾಗರದ ನೀರು ಅಸಾಮಾನ್ಯವಾಗಿ ಬೆಚ್ಚಗಾಗುವ ಕಾರಣದಿಂದ ಭಾರತದ ಮುಂಗಾರು ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹವಾಮಾನ ವಿದ್ಯಮಾನ.) ಪರಿಣಾಮದಿಂದ ಮಳೆ ಕೊರತೆ ಉಂಟಾಗುವ ಸಾಧ್ಯತೆಯಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿರುವ ಹಿನ್ನೆಲೆಯಲ್ಲಿ, ಕೇಂದ್ರ ಕೃಷಿ ಸಚಿವಾಲಯವು ಜಿಲ್ಲಾಮಟ್ಟದಲ್ಲಿ ಸಮನ್ವಯಿತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಎಲ್ ನಿನೋ ಎನ್ನುವುದು ಸಾಮಾನ್ಯವಾಗಿ ಮುಂಗಾರು ದುರ್ಬಲಗೊಳ್ಳಲು ಕಾರಣವಾಗುವ ಹವಾಮಾನ ವಿದ್ಯಮಾನವಾಗಿದ್ದು, ಇದರ ಪರಿಣಾಮವಾಗಿ ದೇಶದ ಹಲವು ಭಾಗಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಜೊತೆಗೆ ಉತ್ತರ ಪ್ರದೇಶ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ಗುಜರಾತ್, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್ ಹಾಗೂ ಮಹಾರಾಷ್ಟ್ರ ರಾಜ್ಯಗಳೂ ಮಳೆ ಕೊರತೆಯ ಅಪಾಯದಲ್ಲಿವೆ.

ಒಟ್ಟು 326 ಜಿಲ್ಲೆಗಳನ್ನು ಎಲ್ ನಿನೋ ಪರಿಣಾಮಕ್ಕೆ ಒಳಗಾಗುವ ಸಾಧ್ಯತೆಯಿರುವ ಜಿಲ್ಲೆಗಳೆಂದು ಗುರುತಿಸಲಾಗಿದೆ. ಖರೀಫ್ 2026 ಹಂಗಾಮಿನ ಸಿದ್ಧತೆಗಳ ಕುರಿತು ನಡೆದ ವಾರದ ಪರಿಶೀಲನಾ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ಚೌರಾಣ್ ಸಿಂಗ್ ಮಾತನಾಡಿ, ಎಲ್ ನಿನೋ ಪರಿಣಾಮ ಹೆಚ್ಚಾಗುವ ಸಾಧ್ಯತೆಯಿರುವ ರಾಜ್ಯಗಳ ಜಿಲ್ಲಾಡಳಿತಗಳು, ಕೃಷಿ ಇಲಾಖೆಗಳು ಮತ್ತು ಕೃಷಿ ವಿಗ್ಯಾನ್ ಕೇಂದ್ರ (ಕೆವಿಕೆ)ಗಳು ಸಮನ್ವಯ ಸಭೆಗಳನ್ನು ನಡೆಸಬೇಕು ಎಂದು ಸೂಚಿಸಿದರು.

ಮಳೆ ಕೊರತೆಯನ್ನು ಎದುರಿಸಬಹುದಾದ ಜಿಲ್ಲೆಗಳಿಗಾಗಿ ತುರ್ತು ಪರ್ಯಾಯ ಯೋಜನೆಗಳನ್ನು ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೊತೆಗೆ, ಸೂಕ್ತ ಪ್ರದೇಶಗಳಲ್ಲಿ ಹತ್ತಿ ಮತ್ತು ಬೇಳೆ ಬೆಳೆಗಳ ಬಿತ್ತನೆ ಹೆಚ್ಚಿಸಲು ಉತ್ತೇಜನ ನೀಡುವಂತೆ ಸಲಹೆ ನೀಡಿದರು. ಜಲ ಸಂರಕ್ಷಣೆ, ಮಣ್ಣಿನ ತೇವಾಂಶ ನಿರ್ವಹಣೆ, ಅಂತರಬೆಳೆ ಪದ್ಧತಿ ಹಾಗೂ ಪರ್ಯಾಯ ಕೃಷಿ ವ್ಯವಸ್ಥೆಗಳ ಮೇಲೆ ವಿಶೇಷ ಗಮನಹರಿಸಿ ಜಿಲ್ಲಾವಾರು ಪ್ರಾಯೋಗಿಕ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಸಚಿವರು ಒತ್ತಿಹೇಳಿದರು. ರೈತರಿಗೆ ನೀಡುವ ಮಾಹಿತಿಯಿಂದ ಆತಂಕ ಉಂಟಾಗಬಾರದು ಎಂದು ಸೂಚಿಸಿದ ಅವರು, ವೈಜ್ಞಾನಿಕ ವಿಶ್ಲೇಷಣೆಯ ಆಧಾರದ ಮೇಲೆ ನಿಖರ ಹಾಗೂ ಪರಿಹಾರಕೇಂದ್ರಿತ ಮಾಹಿತಿಯನ್ನೇ ರೈತರಿಗೆ ತಲುಪಿಸಬೇಕು ಎಂದು ಹೇಳಿದರು.

ಕರ್ನಾಟಕದ ರೈತರಿಗೆ ಸಲಹೆಗಳು:
* ಮಳೆ ನೀರಿನ ಸಂಗ್ರಹಣೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡುವುದು.
* ಕಡಿಮೆ ನೀರಿನ ಅವಶ್ಯಕತೆ ಇರುವ ಬೆಳೆಗಳತ್ತ ಗಮನ ಹರಿಸುವುದು.
* ಅಂತರಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು.
* ಕೃಷಿ ಇಲಾಖೆಗಳು ಮತ್ತು ಕೆವಿಕೆಗಳಿಂದ ನೀಡುವ ಹವಾಮಾನ ಆಧಾರಿತ ಸಲಹೆಗಳನ್ನು ಪಾಲಿಸುವುದು.
* ಮಳೆ ಕೊರತೆಯ ಪರಿಸ್ಥಿತಿಗೆ ಅನುಗುಣವಾಗಿ ಪರ್ಯಾಯ ಬೆಳೆ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವುದು. ಎಲ್ ನಿನೋ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದ್ದರೂ, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಮತ್ತು ಕೃಷಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

El Nino warning for Karnataka: Centre advises precautionary measures – ತುಳು ಟೈಮ್ಸ್

ಇದನ್ನೂ ಓದಿ : ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಪಾರದರ್ಶಕತೆಗೆ ಒತ್ತು: ಪ್ರಿಯಾಂಕ್ ಖರ್ಗೆಯಿಂದ ವಿಶೇಷ ಅಧಿಕಾರಿಯ ನೇಮಕ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/TyY1XWjQHTE

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 210

You cannot copy content of this page