ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಅಪ್ರಾಪ್ತರಿಗೆ ಮದ್ಯ ಮಾರಾಟಕ್ಕೆ ಬ್ರೇಕ್: ಕರ್ನಾಟಕ ಸರ್ಕಾರದಿಂದ ಕಟ್ಟುನಿಟ್ಟಿನ ನಿಯಮ ಜಾರಿ

ಬೆಂಗಳೂರು: Tulu Times l ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಮದ್ಯಪಾನದ ಪ್ರವೃತ್ತಿಯನ್ನು ತಡೆಯಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದ ಎಲ್ಲಾ ಬಾರ್‌ಗಳು, ಪಬ್‌ಗಳು, ಕ್ಲಬ್‌ಗಳು, ಲಾಂಚ್ ಗಳು ಹಾಗೂ ಮದ್ಯ ಮಾರಾಟ ಮಾಡುವ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರ ವಯಸ್ಸು ಕಡ್ಡಾಯವಾಗಿ ಪರಿಶೀಲಿಸುವಂತೆ ಸರ್ಕಾರ ಆದೇಶಿಸಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಮದ್ಯ ಸೇವಿಸಲು ಅಥವಾ ಮದ್ಯ ಲಭ್ಯವಿರುವ ಸ್ಥಳಗಳಿಗೆ ಪ್ರವೇಶ ಪಡೆಯಲು ಬರುವ ಪ್ರತಿಯೊಬ್ಬ ಗ್ರಾಹಕರ ವಯಸ್ಸನ್ನು ಸರ್ಕಾರ ಮಾನ್ಯತೆ ನೀಡಿರುವ ಗುರುತಿನ ಚೀಟಿ ಮೂಲಕ ಪರಿಶೀಲಿಸಬೇಕು. ವಯಸ್ಸಿನ ದೃಢೀಕರಣಕ್ಕೆ ಅಗತ್ಯ ದಾಖಲೆ ಸಲ್ಲಿಸಲು ವಿಫಲರಾದವರಿಗೆ ಪ್ರವೇಶ ನೀಡುವುದಾಗಲಿ ಅಥವಾ ಮದ್ಯ ಪೂರೈಸುವುದಾಗಲಿ ನಿಷೇಧಿಸಲಾಗಿದೆ.

ಎಲ್ಲಾ ಮದ್ಯ ಮಾರಾಟ ಕೇಂದ್ರಗಳಿಗೆ ಸೂಚನೆ;

ಗೃಹ ಇಲಾಖೆಯು ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಪರವಾನಗಿ ಪಡೆದಿರುವ ಎಲ್ಲಾ ಪಬ್‌, ಬಾರ್‌, ಕ್ಲಬ್‌, ಲಾಂಚ್ ಮತ್ತು ರೆಸ್ಟೋರೆಂಟ್‌ಗಳಿಗೆ ಈ ಕುರಿತು ಸೂಚನೆ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಇದರಿಂದ ಮುಂದೆ ಮದ್ಯ ಪೂರೈಸುವ ಮೊದಲು ಸಿಬ್ಬಂದಿ ಗ್ರಾಹಕರ ವಯಸ್ಸನ್ನು ಪರಿಶೀಲಿಸುವುದು ಕಡ್ಡಾಯವಾಗಲಿದೆ. ಈ ನಿಯಮಗಳ ಪಾಲನೆಯ ಸಂಪೂರ್ಣ ಹೊಣೆಗಾರಿಕೆ ಸಂಬಂಧಿತ ಸಂಸ್ಥೆಗಳ ಮಾಲೀಕರು ಹಾಗೂ ಆಡಳಿತ ಮಂಡಳಿಯ ಮೇಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡಿರುವುದು ಅಥವಾ ಮದ್ಯ ಸೇವಿಸಲು ಅವಕಾಶ ನೀಡಿರುವುದು ಕಂಡುಬಂದರೆ ಸಂಬಂಧಿತ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.‌ ಮಕ್ಕಳ ಭವಿಷ್ಯ ಮತ್ತು ಕಲ್ಯಾಣಕ್ಕಿಂತ ವ್ಯಾಪಾರ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಬಾರದು ಎಂದು ಸರ್ಕಾರ ಒತ್ತಿಹೇಳಿದೆ. ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವುದು ಕಾನೂನುಬಾಹಿರ ಕೃತ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

ಈ ನಿಯಮಗಳು ಕೇವಲ ಬಾರ್‌ ಮತ್ತು ಪಬ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಖಾಸಗಿ ಸಮಾರಂಭಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ಇತರ ಆಯೋಜಿತ ಕಾರ್ಯಕ್ರಮಗಳಲ್ಲಿ ಮದ್ಯ ವಿತರಣೆ ನಡೆಯುವ ಸಂದರ್ಭಗಳಲ್ಲಿಯೂ ಆಯೋಜಕರೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಅಂತಹ ಕಾರ್ಯಕ್ರಮಗಳಲ್ಲಿ ಅಪ್ರಾಪ್ತರಿಗೆ ಮದ್ಯ ಸಿಗದಂತೆ ನೋಡಿಕೊಳ್ಳುವುದು ಆಯೋಜಕರ ಕರ್ತವ್ಯವಾಗಿದೆ. ರಾಜ್ಯದಾದ್ಯಂತ ಪೊಲೀಸ್ ಇಲಾಖೆ ಈ ನಿಯಮಗಳ ಅನುಷ್ಠಾನವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಿದ್ದು, ಯಾವುದೇ ವಿನಾಯಿತಿ ಇಲ್ಲದೆ ಎಲ್ಲ ಸಂಸ್ಥೆಗಳು ನಿಯಮ ಪಾಲನೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲಿದೆ.

ಅಪ್ರಾಪ್ತ ವಯಸ್ಸಿನವರಲ್ಲಿ ಮದ್ಯಪಾನ ಪ್ರವೃತ್ತಿಯನ್ನು ತಡೆಯುವ ಹಾಗೂ ಯುವಜನರ ಆರೋಗ್ಯ ಮತ್ತು ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮ ಮಹತ್ವದ ಹೆಜ್ಜೆಯಾಗಿದೆ. ಗುರುತಿನ ಚೀಟಿ ಇಲ್ಲದಿದ್ದರೆ ಪ್ರವೇಶವೂ ಇಲ್ಲ, ಮದ್ಯವೂ ಇಲ್ಲ ಎಂಬ ಸಂದೇಶದೊಂದಿಗೆ ರಾಜ್ಯ ಸರ್ಕಾರ ಮದ್ಯ ಮಾರಾಟದ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ.

Karnataka government imposes strict rules on sale of liquor to minors – ತುಳುಟೈಮ್ಸ್

ಇದನ್ನೂ ಓದಿ :ಬ್ರೈನ್ ಟ್ಯೂಮರ್ ಲಕ್ಷಣಗಳ ಬಗ್ಗೆ ತಿಳಿದಿರಲಿ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/4YZRyXeZwSU

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 182

You cannot copy content of this page