ಬೆಂಗಳೂರು : Tulu Times | ದಕ್ಷಿಣ ಸುಡಾನ್‌ನಲ್ಲಿನ ಐಕ್ಯರಾಷ್ಟ್ರಗಳ ಶಾಂತಿರಕ್ಷಣಾ ಮಿಷನ್ (UNMISS)ನಲ್ಲಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ 31 ವರ್ಷದ ಸೇನಾ ಅಧಿಕಾರಿ ಮೇಜರ್ ಸ್ವಾತಿ ಶಾಂತಾ ಕುಮಾರ್ ಅವರಿಗೆ ‘Equal Partners, Lasting Peace’ ಎಂಬ ಯೋಜನೆಗಾಗಿ ‘ಐಕ್ಯರಾಷ್ಟ್ರಗಳ ಮಹಾಸಚಿವರ ಪ್ರಶಸ್ತಿ–2025’ ನೀಡಲಾಯಿತು.
5,000 ಮಹಿಳೆಯರಿಗೆ ಸುರಕ್ಷಿತ ವಾತಾವರಣ ;
ಭಾನುವಾರ ಐಕ್ಯರಾಷ್ಟ್ರಗಳ ಮಹಾಸಚಿವ ಆಂಟೋನಿಯೊ ಗುಟೆರಸ್ ಈ ಪ್ರಶಸ್ತಿಯನ್ನು ಘೋಷಿಸಿದ್ದು, ದಕ್ಷಿಣ ಸುಡಾನ್‌ನ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಸುಮಾರು 5,000 ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಿ, ಅವರು ಮುಕ್ತವಾಗಿ ಸಂಚರಿಸಲು ಹಾಗೂ ಸ್ಥಳೀಯ ಶಾಂತಿ ಸಂವಾದಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಿದ ಮೇಜರ್ ಸ್ವಾತಿಯ ತಂತ್ರಾತ್ಮಕ ಕಾರ್ಯಾಚರಣೆಗಳನ್ನು ಈ ಪ್ರಶಸ್ತಿ ಗೌರವಿಸುತ್ತದೆ. ಮೇಜರ್ ಸ್ವಾತಿ ಅವರು ಭಾರತೀಯ ಎಂಗೇಜ್‌ಮೆಂಟ್ ತಂಡದ ನೇತೃತ್ವ ವಹಿಸಿಕೊಂಡಿದ್ದು, ಗ್ರಾಮೀಣ ಮಟ್ಟದಲ್ಲಿ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಸ್ಥಳೀಯ ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಯೋಜನೆ ಐಕ್ಯರಾಷ್ಟ್ರಗಳ ವಿವಿಧ ಶಾಂತಿರಕ್ಷಣಾ ಮಿಷನ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ನಡುವೆ ನಡೆದ ಕಠಿಣ ಸ್ಪರ್ಧಾತ್ಮಕ ಮತದಾನದ ಬಳಿಕ ‘ಲಿಂಗ ಸಮಾನತೆ ವಿಭಾಗ’ದಲ್ಲಿ ಯಶಸ್ವಿಯಾಗಿ ಹೊರಹೊಮ್ಮಿದೆ.
ಅಂತರರಾಷ್ಟ್ರೀಯ ಶಾಂತಿರಕ್ಷಣಾ ಕಾರ್ಯಾಚರಣೆಗಳಲ್ಲಿ ಲಿಂಗ ಸಮಾನತೆಗೆ ಹೊಸ ಮಾದರಿ ಸ್ಥಾಪನೆ ;
ಅವರ ನೇತೃತ್ವದಲ್ಲಿ ಭಾರತೀಯ ಪಡೆಗಳು ಚಿಕ್ಕ ಹಾಗೂ ದೀರ್ಘ ದೂರದ ಪ್ಯಾಟ್ರೋಲ್‌ಗಳು, ನದೀ ಮಾರ್ಗದ ಸಂಯುಕ್ತ ಪ್ಯಾಟ್ರೋಲ್‌ಗಳು ಮತ್ತು ವೈಮಾನಿಕ ಪ್ಯಾಟ್ರೋಲ್‌ಗಳನ್ನು ನಡೆಸಿ, ದಕ್ಷಿಣ ಸುಡಾನ್‌ನ ಅತ್ಯಂತ ದೂರದ ಮತ್ತು ಹಿಂಸಾಚಾರದಿಂದ ತತ್ತರಿಸಿರುವ ಜಿಲ್ಲೆಗಳವರೆಗೆ ತಲುಪಿವೆ. ಮುಂಚೂಣಿ ಕಾರ್ಯಾಚರಣೆಗಳಲ್ಲಿ ಮಹಿಳಾ ಶಾಂತಿರಕ್ಷಕರನ್ನು ನಿಯೋಜಿಸುವ ಮೂಲಕ, ಅಂತರರಾಷ್ಟ್ರೀಯ ಶಾಂತಿರಕ್ಷಣಾ ಕಾರ್ಯಾಚರಣೆಗಳಲ್ಲಿ ಲಿಂಗ ಸಮಾನತೆಗೆ ಹೊಸ ಮಾದರಿ ಸ್ಥಾಪಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಮಹಾಸಚಿವ ಆಂಟೋನಿಯೊ ಗುಟೆರಸ್, ಮೇಜರ್ ಸ್ವಾತಿಯ ಈ ಯೋಜನೆ UNMISSನ ಲಿಂಗ ಸಮಾವೇಶಿತ ದೃಷ್ಟಿಕೋನವನ್ನು ಬಹಳ ಮಟ್ಟಿಗೆ ಬಲಪಡಿಸಿದೆ ಎಂದು ಶ್ಲಾಘಿಸಿದರು.
ಮಗಳ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರ ತಾಯಿ ರಾಜಮಣಿ (ನಿವೃತ್ತ ಮುಖ್ಯೋಪಾಧ್ಯಾಯಿನಿ), “ಸ್ವಾತಿ ನನ್ನ ಮೂವರು ಪುತ್ರಿಯರಲ್ಲಿ ಹಿರಿಯಳು. ತುಂಬಾ ಧೈರ್ಯಶಾಲಿ ಹುಡುಗಿ. 2018ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA)ಯಲ್ಲಿ ತರಬೇತಿ ಪೂರ್ಣಗೊಳಿಸಿದ್ದಾಳೆ,” ಎಂದರು. ಅವಳು ಎರಡು ವರ್ಷ ಪಶ್ಚಿಮ ಬಂಗಾಳದ ಕಲಿಂಪಾಂಗ್‌ನಲ್ಲಿ ಲೆಫ್ಟಿನೆಂಟ್ ಆಗಿ, ನಂತರ ಎರಡು ವರ್ಷ ಲಡಾಖ್‌ನ ಲೇಹ್ ಜಿಲ್ಲೆಯ ಒಂದು ಗ್ರಾಮದಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದಾಳೆ. ಬಳಿಕ ಒಂದು ವರ್ಷ ಗುಜರಾತ್‌ನಲ್ಲಿ ಸೇವೆ ಮಾಡಿ, ನಂತರ ದಕ್ಷಿಣ ಸುಡಾನ್‌ಗೆ ನಿಯೋಜಿಸಲ್ಪಟ್ಟಿದ್ದಾಳೆ,” ಎಂದು ಹೆಮ್ಮೆಯಿಂದ ಹೇಳುತ್ತಾರೆ.
Brave female army officer from Bengaluru wins UN Secretary-General’s award – ತುಳು ಟೈಮ್ಸ್
ಇದನ್ನೂ ಓದಿ :34 ವರ್ಷದ ಮಹಿಳಾ ಟೆಕ್ಕಿ ಕೊಲೆ ಟ್ವಿಸ್ಟ್..ನೆರೆಮನೆಯ ಯುವಕ ಮಾಡಿದ್ದೇನು ಗೊತ್ತಾ..?
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/SDL5CAMpIQ0?si=YzNNNOhaMB2P0rSo











