ನವದೆಹಲಿ : Tulu Times l ದೇಶದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ಹೊಸ ಚರ್ಚೆಯೊಂದು ಆರಂಭವಾಗಿದೆ. ₹2,000ಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ ವಿಧಿಸುವ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿದ್ದು, ಇದು ವ್ಯಾಪಾರಿಗಳು ಹಾಗೂ ಯುಪಿಐ ಬಳಕೆದಾರರ ಗಮನ ಸೆಳೆದಿದೆ.
ಮಾಧ್ಯಮ ವರದಿಗಳ ಪ್ರಕಾರ, ₹2,000ಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟುಗಳಿಗೆ ಶೇ. 0.25ರಿಂದ 0.40ರಷ್ಟು ಎಂಡಿಆರ್ ವಿಧಿಸುವ ಪ್ರಸ್ತಾವನೆ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಯುಪಿಐ ಹಣ ವರ್ಗಾವಣೆಗೆ ಈ ಶುಲ್ಕ ಅನ್ವಯಿಸುವುದಿಲ್ಲ ಎಂದು ವರದಿಗಳು ತಿಳಿಸಿವೆ. ಅಂದರೆ, ಸ್ನೇಹಿತರು ಅಥವಾ ಕುಟುಂಬದವರಿಗೆ ಹಣ ಕಳುಹಿಸುವ ಸಾಮಾನ್ಯ ಯುಪಿಐ ವರ್ಗಾವಣೆಗಳು ಹಿಂದಿನಂತೆಯೇ ಉಚಿತವಾಗಿರಬಹುದೆಂಬ ನಿರೀಕ್ಷೆ ಇದೆ.

ಯುಪಿಐ ದೇಶದಲ್ಲಿ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಬೆಳೆಯುತ್ತಿದ್ದು, ಪ್ರತಿದಿನ ಕೋಟ್ಯಂತರ ವಹಿವಾಟುಗಳು ಇದರ ಮೂಲಕ ನಡೆಯುತ್ತಿವೆ. ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ವ್ಯಾಪಾರ ಸಂಸ್ಥೆಗಳವರೆಗೆ ಯುಪಿಐ ಬಳಕೆ ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಎಂಡಿಆರ್ ಜಾರಿಗೆ ಬಂದರೆ ಅದರ ವೆಚ್ಚವನ್ನು ವ್ಯಾಪಾರಿಗಳು ತಾವೇ ಭರಿಸುತ್ತಾರೆಯೇ ಅಥವಾ ಗ್ರಾಹಕರ ಮೇಲೆ ವರ್ಗಾಯಿಸುತ್ತಾರೆಯೇ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸೇವಾ ವೆಚ್ಚವನ್ನು ಸರಿದೂಗಿಸಲು ಎಂಡಿಆರ್ ಕುರಿತು ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಕೇಂದ್ರ ಸರ್ಕಾರ ಅಥವಾ ಸಂಬಂಧಿತ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ, ₹2,000 ಮೇಲ್ಪಟ್ಟ ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲಾಗುವುದು ಎಂಬುದು ಸದ್ಯಕ್ಕೆ ಅಧಿಕೃತವಾಗಿ ದೃಢಪಟ್ಟಿಲ್ಲ. ಸರ್ಕಾರದಿಂದ ಅಂತಿಮ ನಿರ್ಧಾರ ಅಥವಾ ಅಧಿಸೂಚನೆ ಹೊರಬಂದ ಬಳಿಕವೇ ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಪರಿಶೀಲಿಸಿ, ಅಧಿಕೃತ ಪ್ರಕಟಣೆಗಳನ್ನೇ ನಂಬುವಂತೆ ತಜ್ಞರು ಸಲಹೆ ನೀಡಿದ್ದಾರೆ.
Is there a charge for UPI payments exceeding ₹2,000? – ತುಳುಟೈಮ್ಸ್
ಇದನ್ನೂ ಓದಿ :ಸುಳ್ಯ : ವಿಷ್ಣುವರ್ಧನ್‌ರನ್ನು ಹಲವು ಬಾರಿ ಭೇಟಿಯಾದ ಸುಳ್ಯದ ಆಟೋ ಚಾಲಕನ ನೆನಪುಗಳ ಪಯಣ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IKW_z7twgxc











