ಸುಳ್ಯ : Tulu Times l ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂಗಸಂಸ್ಥೆಯಾದ ಕೆವಿಜಿ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯಲ್ಲಿ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಅಧ್ಯಕ್ಷರು ಹಾಗೂ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಗಣ್ಯರೊಂದಿಗೆ ದೀಪ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ದಿಲೀಪ್ ಎನ್.ಆರ್., ಗ್ರಾಮೀಣ ಪ್ರದೇಶವಾದ ಸುಳ್ಯವನ್ನು ಶಿಕ್ಷಣದ ಮೂಲಕ ವಿದ್ಯಾಕಾಶಿಯನ್ನಾಗಿ ರೂಪಿಸಿದ ಡಾ. ಕೆ.ವಿ.ಜಿ. ಅವರ ದೂರದೃಷ್ಟಿ, ಕನಸು ಹಾಗೂ ಸಂಕಲ್ಪವನ್ನು ಶ್ಲಾಘಿಸಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು, ವೃತ್ತಿಜೀವನದಲ್ಲಿ ಸದಾ ನಗುನಗುತ್ತಿರಬೇಕು, ರೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು, ನೈತಿಕ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ವೈಯಕ್ತಿಕ ಬದುಕಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ನಿರಂತರ ಕಲಿಕೆ, ಕೌಶಲ್ಯ ವೃದ್ಧಿ ಮತ್ತು ಸೇವಾ ಮನೋಭಾವವೇ ಯಶಸ್ವಿ ಫಿಸಿಯೋಥೆರಪಿಸ್ಟ್‌ನ ಪ್ರಮುಖ ಗುಣಗಳಾಗಿವೆ ಎಂದು ಅವರು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಡಾ. ಕೆ.ವಿ. ಚಿದಾನಂದ, ಪದವಿ ಪ್ರದಾನವು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಅಂತ್ಯವಲ್ಲ, ಜವಾಬ್ದಾರಿಯುತ ವೃತ್ತಿಜೀವನದ ಹೊಸ ಆರಂಭವಾಗಿದೆ ಎಂದರು. ಫಿಸಿಯೋಥೆರಪಿ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಕ್ಷೇತ್ರದಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ನೈತಿಕತೆ ಅತ್ಯಗತ್ಯ ಎಂದು ತಿಳಿಸಿದರು. ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಉದ್ಘಾಟನಾ ಭಾಷಣ ಮಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಸಮಾರಂಭದಲ್ಲಿ ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿಶ್ವವಿದ್ಯಾಲಯದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯದ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕೆವಿಜಿ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ. ಮನೀಶ್ ಎ., ಅಸೋಸಿಯೇಟ್ ಪ್ರೊಫೆಸರ್ ಡಾ. ವಿ. ಮಹೇಶ್ ರೆಡ್ಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ., ಕೆವಿಜಿ ಮೆಡಿಕಲ್ ಕಾಲೇಜಿನ ರಿಜಿಸ್ಟ್ರಾರ್ ಡಾ. ಸಂದೇಶ್ ಕೆ.ಎಸ್., ವಿವಿಧ ಸಹಸಂಸ್ಥೆಗಳ ಪ್ರಾಂಶುಪಾಲರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಾದ ರಕ್ಷಾ, ರೋಜಶ್ರೀ ಹಾಗೂ ಅರುಣಿಮ ಪ್ರಾರ್ಥಿಸಿದರು. ಡಾ. ಮನೀಶ್ ಎ. ಸ್ವಾಗತಿಸಿದರು. ಡಾ.ಸಾಯಿರಾಂ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ವಿ. ಮಹೇಶ್ ರೆಡ್ಡಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ಕ್ಷೇಮ ಕೆ.ಎಲ್. ಹಾಗೂ ಡಾ. ಅಶ್ವಿತಾ ವಂದಿಸಿದರು. ಶಹಬಾ ಕಾರ್ಯಕ್ರಮ ನಿರೂಪಿಸಿದರು.
Physiotherapy: A Service-Oriented Profession – Dr. K.V. Chidananda – ತುಳುಟೈಮ್ಸ್
ಇದನ್ನೂ ಓದಿ :ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಲು ಈ ಆಹಾರ ಕ್ರಮಗಳನ್ನು ಅನುಸರಿಸಿ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IKW_z7twgxc











