ಗದಗ: Tulu Times l ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಒಂದಾದ ಹೆಸರುಕಾಳು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ ₹9,000 ರಿಂದ ₹11,000ರವರೆಗೆ ಉತ್ತಮ ಬೆಲೆ ಪಡೆಯುತ್ತಿದ್ದರೂ, ಇಳುವರಿ ತೀವ್ರ ಕುಸಿದಿರುವುದರಿಂದ ಗದಗ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪ ಮಳೆ ಹಾಗೂ ಬೆಳೆರೋಗದ ಪರಿಣಾಮ ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಉತ್ತಮ ಬೆಲೆಯ ಲಾಭ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ರೋಹಿಣಿ ಮಳೆಯು ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೈತರು ಹೆಚ್ಚಿನ ನಿರೀಕ್ಷೆಯೊಂದಿಗೆ ಹೆಸರು ಬೆಳೆ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆಯ ನಂತರ ಹಾಗೂ ಹೂ ಬಿಡುವ ಮತ್ತು ಕಾಳು ಕಟ್ಟುವ ಅತ್ಯಂತ ಪ್ರಮುಖ ಹಂತದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿತು. ಇದರ ಜೊತೆಗೆ ವಿವಿಧ ಬೆಳೆರೋಗಗಳು ವ್ಯಾಪಕವಾಗಿ ಕಾಣಿಸಿಕೊಂಡು ಬೆಳೆಗೆ ಭಾರೀ ಹಾನಿಯುಂಟಾಗಿದೆ.
ಒಂದು ಎಕರೆಗೆ ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿ ಹಾಗೂ ಕಳೆ ತೆಗೆಯುವ ವೆಚ್ಚ ಸೇರಿ ಸುಮಾರು ₹15 ಸಾವಿರಕ್ಕೂ ಅಧಿಕ ಹಣವನ್ನು ರೈತರು ಹೂಡಿಕೆ ಮಾಡಿದ್ದಾರೆ. ಸಾಮಾನ್ಯವಾಗಿ ಪ್ರತಿ ಎಕರೆಗೆ 4 ರಿಂದ 8 ಕ್ವಿಂಟಲ್ವರೆಗೆ ಇಳುವರಿ ನಿರೀಕ್ಷಿಸಲಾಗುತ್ತದೆ. ಆದರೆ ಈ ಬಾರಿ ಹಲವೆಡೆ ಕೇವಲ 50 ಕೆ.ಜಿ.ಯಿಂದ ಒಂದು ಕ್ವಿಂಟಲ್ವರೆಗೂ ಮಾತ್ರ ಹೆಸರು ದೊರೆಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ಹೆಸರುಕಾಳಿಗೆ ಪ್ರತಿ ಕ್ವಿಂಟಲ್ಗೆ ₹8,558 ಕನಿಷ್ಠ ಬೆಂಬಲ ಬೆಲೆ ಘೋಷಿಸಿತ್ತು. ಇದರೊಂದಿಗೆ ಉತ್ತಮ ಮುಂಗಾರು ಮಳೆಯ ನಿರೀಕ್ಷೆಯಿಂದ ಗದಗ ಜಿಲ್ಲೆಯಲ್ಲಿ 1,17,240 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆಯಲಾಗಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ಪ್ರದೇಶವಾಗಿದೆ. ಆದರೆ ಕಾಳು ಕಟ್ಟುವ ಹಂತದಲ್ಲಿ ಮಳೆ ಕೊರತೆ ಹಾಗೂ ನಂತರ ಸುರಿದ ಅಕಾಲಿಕ ಮಳೆಯ ಪರಿಣಾಮ ಇಳುವರಿ ತೀವ್ರವಾಗಿ ಕುಸಿದಿದೆ. ಇದರಿಂದ ಕೃಷಿಗಾಗಿ ಪಡೆದಿರುವ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿ ರೈತರು ಮುಳುಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ತಕ್ಷಣವೇ ಬೆಳೆ ಸಮೀಕ್ಷೆ ನಡೆಸಬೇಕು, ಬೆಳೆ ವಿಮೆ ಯೋಜನೆಯಡಿ ನಷ್ಟವನ್ನು ದಾಖಲಿಸಬೇಕು, ರೈತರಿಗೆ ಮಧ್ಯಂತರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಇತರ ಮುಂಗಾರು ಬೆಳೆಗಳ ಸಮೀಕ್ಷೆಯನ್ನೂ ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ‘ಹೆಸರು ಬೆಳೆ ಬೆಳೆಯಲು ಸಾಲ ಮಾಡಿ ಕೃಷಿ ಮಾಡಿದ್ದೇವೆ. ಕಳೆದ ಮೂರು ತಿಂಗಳಿಂದ ಕಳೆ ತೆಗೆಯುವುದು ಸೇರಿದಂತೆ ಸಾಕಷ್ಟು ವೆಚ್ಚ ಮಾಡಿದ್ದೇವೆ. ಈಗ ಹೂಡಿದ ಹಣವೂ ವಾಪಸ್ ಬರುತ್ತಿಲ್ಲ. ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು, ಎಂದು ರೈತ ಭೀಮಪ್ಪ ಗುಂಡಳ್ಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
Farmers’ pockets remain empty despite skyrocketing crop prices; Gadag farmers in distress due to green gram crop losses – ತುಳುಟೈಮ್ಸ್
ಇದನ್ನೂ ಓದಿ :ರಾಜ್ಯ ರಾಜಕೀಯದಲ್ಲಿ ಕೊಡಗಿನ ಹೆಮ್ಮೆ: ಉಪಸಭಾಧ್ಯಕ್ಷರಾಗಿ ಎ.ಎಸ್. ಪೊನ್ನಣ್ಣ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/_mb3O1ZHoIc?si=dO5w4JYu7QaiXY07











