ಮಂಗಳೂರು : Tulu Times l ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಲಾವಣ್ಯ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಹತ್ಯೆಗೆ ಬಳಸಲಾಗಿದೆ ಎನ್ನಲಾದ ಆಯುಧವನ್ನು ಖರೀದಿಸಿದ ಸ್ಥಳದಲ್ಲಿ ಪೊಲೀಸರು ಬುಧವಾರ ಮಹಜರು ನಡೆಸಿ ಘಟನೆಗಳ ಮರುಸೃಷ್ಟಿ ಮಾಡಿದ್ದಾರೆ.

ಜುಲೈ 16ರಂದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಅವರನ್ನು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಜಿಲ್ಲೆಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತನಿಖೆಯ ಪ್ರಕಾರ, ಆರೋಪಿ ಚೇತನ್ ಹತ್ಯೆಯನ್ನು ಮುಂಚಿತವಾಗಿಯೇ ಯೋಜಿಸಿದ್ದ ಎನ್ನುವ ಅನುಮಾನ ವ್ಯಕ್ತವಾಗಿದೆ. ಅದರ ಭಾಗವಾಗಿ, ಜುಲೈ 15ರಂದು, ಅಂದರೆ ಘಟನೆಗೆ ಒಂದು ದಿನ ಮೊದಲು, ಆತ ಉಪ್ಪಿನಂಗಡಿಗೆ ತೆರಳಿ ಕೃಷಿ ಉಪಕರಣಗಳ ಅಂಗಡಿಗೆ ಭೇಟಿ ನೀಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲಿ ಕೃಷಿ ಕೆಲಸಗಳಿಗೆ ಬಳಸುವ ಉದ್ದನೆಯ ಚಾಕುವನ್ನು ಪರಿಶೀಲಿಸಿ ಅದರ ಬೆಲೆಯನ್ನು ವಿಚಾರಿಸಿ, ಖರೀದಿಸದೇ ಅಂಗಡಿಯಿಂದ ಹೊರಟಿದ್ದನು. ಬಳಿಕ ಮತ್ತಷ್ಟು ಮಾಹಿತಿ ಪಡೆದು ಮತ್ತೆ ಅದೇ ಅಂಗಡಿಗೆ ಬಂದು ಚಾಕುವನ್ನು ಖರೀದಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದು, ಚಾಕುವನ್ನು ಕಾಗದದಲ್ಲಿ ಸುತ್ತಿ ಪ್ಯಾಕ್ ಮಾಡುತ್ತಿರುವ ದೃಶ್ಯಗಳು ದಾಖಲಾಗಿವೆ. ಖರೀದಿಸಿದ ಬಳಿಕ ಆರೋಪಿ ಸ್ವಲ್ಪ ಸಮಯ ಚಾಕುವನ್ನು ಅಂಗಡಿಯಲ್ಲೇ ಬಿಟ್ಟು ಹೋಗಿ, ನಂತರ ಮರಳಿ ಬಂದು ಅದನ್ನು ಪಡೆದು ತೆರಳಿರುವುದು ಕೂಡ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಬುಧವಾರ ಆರೋಪಿಯನ್ನು ಉಪ್ಪಿನಂಗಡಿಯ ಅಂಗಡಿಗೆ ಕರೆತಂದು ಸ್ಥಳ ಮಹಜರು ನಡೆಸಲಾಯಿತು. ಆರೋಪಿಯ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಲಾಗಿದ್ದು, ಪೊಲೀಸರು ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ದಾಖಲಿಸಿ ಘಟನೆಯ ಕ್ರಮವನ್ನು ಮರುಸೃಷ್ಟಿ ಮಾಡಿದರು. ಪ್ರಕರಣದ ತನಿಖೆ ಮುಂದುವರಿದಿದ್ದು, ಹತ್ಯೆಗೆ ಮುನ್ನ ನಡೆದ ಪ್ರತಿಯೊಂದು ಘಟನೆಯ ವಿವರಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
Knife purchased days before the murder; investigation into the Lavanya case intensifies – ತುಳುಟೈಮ್ಸ್
ಇದನ್ನೂ ಓದಿ :ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್; ಆಗಸ್ಟ್‌ನಿಂದ ಹಲವು ವಸ್ತುಗಳು ದುಬಾರಿ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IKW_z7twgxc











