ಬೆಂಗಳೂರು: Tulu Times l ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ಸಾಲಿನ ವಿದೇಶಿ ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿ ವಿದೇಶದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಕಾಲಿಕ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ನೆರವಾಗುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಅರ್ಹತೆಗಳು ;
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು ಹಾಗೂ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪೂರ್ಣಕಾಲಿಕ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರಬೇಕು. ಅರ್ಜಿದಾರರ ವಯಸ್ಸು 40 ವರ್ಷ ಮೀರಿರಬಾರದು. ಜೊತೆಗೆ, ಅವರ ಕುಟುಂಬದ ವಾರ್ಷಿಕ ಆದಾಯ ₹16 ಲಕ್ಷಕ್ಕಿಂತ ಅಧಿಕವಾಗಿರಬಾರದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ದಾಖಲೆಗಳು ;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಶೈಕ್ಷಣಿಕ ದಾಖಲೆಗಳು, ಪ್ರವೇಶ ದೃಢೀಕರಣ ಪತ್ರ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿ, ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡುವಂತೆ ಇಲಾಖೆ ಸೂಚಿಸಿದೆ.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆಯನ್ನು ಕೊನೆಯ ದಿನದವರೆಗೆ ಕಾಯದೆ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಒಳಿತು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಅಪೂರ್ಣ ಅಥವಾ ತಪ್ಪು ಮಾಹಿತಿಯಿರುವ ಅರ್ಜಿಗಳನ್ನು ತಿರಸ್ಕರಿಸುವ ಸಾಧ್ಯತೆ ಇರುವುದರಿಂದ ಅರ್ಜಿ ಭರ್ತಿಯಲ್ಲಿ ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಯೋಜನೆ ಮಹತ್ವದ ಅವಕಾಶವಾಗಿದ್ದು, ಆರ್ಥಿಕ ನೆರವಿನ ಮೂಲಕ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳಲು ಸಹಕಾರಿಯಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31. ಅರ್ಹ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮನವಿ ಮಾಡಿದೆ.
Scholarships for studies abroad; applications invited from minority students – ತುಳುಟೈಮ್ಸ್
ಇದನ್ನೂ ಓದಿ :ಹುಲಿಯ ಬದುಕಿನ ರಹಸ್ಯ: ಮನುಷ್ಯರಿಗೆ ಪ್ರಕೃತಿ ನೀಡುವ ಅಮೂಲ್ಯ ಪಾಠಗಳು
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IKW_z7twgxc











