ಕರ್ನಾಟಕ : Tulu Times l ದರ್ಶನ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಒಂದು ವರ್ಷದೊಳಗೆ ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಾಣದಿದ್ದರೆ ನಟ ದರ್ಶನ್ ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಪ್ರಕರಣದ ಪ್ರಮುಖ 60 ಸಾಕ್ಷಿದಾರರ ಹೇಳಿಕೆಗಳನ್ನು ಒಂದು ವರ್ಷದೊಳಗೆ ದಾಖಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಅಗತ್ಯವಿದ್ದರೆ ದಿನನಿತ್ಯದ ವಿಚಾರಣೆ ನಡೆಸಬಹುದು ಎಂದೂ ಕೋರ್ಟ್ ಹೇಳಿದೆ. ನ್ಯಾಯಾಲಯದ ಮುಂದೆ ರಾಜ್ಯ ಸರ್ಕಾರ ಸಲ್ಲಿಸಿದ ವರದಿಯ ಪ್ರಕಾರ, 2025ರ ನವೆಂಬರ್ 3ರಂದು ಆರೋಪ ನಿಗದಿಯಾಗಿದ್ದರೂ ಕಳೆದ ಏಳು ತಿಂಗಳಲ್ಲಿ ಕೇವಲ 10 ಸಾಕ್ಷಿದಾರರ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಒಟ್ಟು 272 ಸಾಕ್ಷಿದಾರರ ಪಟ್ಟಿಯಿದ್ದು, ಅವರಲ್ಲಿ 60 ಪ್ರಮುಖ ಸಾಕ್ಷಿದಾರರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪಾರ್ಡಿವಾಲಾ, ಈ ವೇಗದಲ್ಲಿ ವಿಚಾರಣೆ ಮುಂದುವರಿದರೆ 60 ಸಾಕ್ಷಿದಾರರ ವಿಚಾರಣೆಯೇ ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದರ್ಶನ್ ಪರ ಹಿರಿಯ ವಕೀಲರು, ಜಾಮೀನು ರದ್ದಾದ ಬಳಿಕ ಏಳು ತಿಂಗಳಲ್ಲಿ ಕೇವಲ 10 ಸಾಕ್ಷಿದಾರರ ವಿಚಾರಣೆ ನಡೆದಿದೆ. ದರ್ಶನ್ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ ಮತ್ತು ಇತರ ಕೈದಿಗಳೊಂದಿಗೆ ಸಂಪರ್ಕಕ್ಕೆ ಅವಕಾಶ ಇಲ್ಲ ಎಂದು ವಾದಿಸಿದರು. ಆದರೆ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಸಿದ್ದಾರ್ಥ್ ಲೂತಾ, ದರ್ಶನ್‌ಗೆ ಜೈಲು ನಿಯಮಾವಳಿಯ ಪ್ರಕಾರ ದೊರೆಯಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಸುಪ್ರೀಂ ಕೋರ್ಟ್, ಅಂಡರ್‌ಟ್ರಯಲ್ ಕೈದಿಗೆ ಜೈಲು ನಿಯಮಾವಳಿಯ ಪ್ರಕಾರ ದೊರೆಯಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ದರ್ಶನ್‌ಗೆ ಒದಗಿಸಬೇಕು ಎಂದು ನಿರ್ದೇಶನ ನೀಡಿದೆ. ಇದೇ ವೇಳೆ, ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಹೆಚ್ಚುವರಿ ಹೊಣೆಗಾರಿಕೆ ನಿರ್ವಹಿಸುತ್ತಿರುವುದರಿಂದ ಪ್ರಕರಣದ ಪ್ರಗತಿ ನಿಧಾನವಾಗಿದೆ ಎಂಬ ವಿಚಾರವೂ ಕೋರ್ಟ್ ಗಮನಕ್ಕೆ ಬಂದಿದೆ. ಈ ವಿಷಯವನ್ನು ಆಡಳಿತಾತ್ಮಕವಾಗಿ ಶೀಘ್ರ ಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಲಾಗಿದೆ. ವಿಚಾರಣೆಯಲ್ಲಿ ವೇಗ ತರಲು ರಕ್ಷಣಾ ಪಕ್ಷವೂ ಸಹಕರಿಸಬೇಕು ಎಂದು ಕೋರ್ಟ್ ಹೇಳಿದ್ದು, ಒಂದು ವರ್ಷದ ನಂತರವೂ ವಿಚಾರಣೆಯಲ್ಲಿ ಸೂಕ್ತ ಪ್ರಗತಿ ಕಾಣದಿದ್ದರೆ ದರ್ಶನ್ ಸಲ್ಲಿಸುವ ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಸ್ಪಷ್ಟಪಡಿಸಿದೆ.
Supreme Court sets deadline for examination of 60 witnesses in 1 year: Darshan, who was awaiting bail, is shocked – ತುಳುಟೈಮ್ಸ್
ಇದನ್ನೂ ಓದಿ :ಕೂದಲು ಬೆಳವಣಿಗೆಗೆ ಅಕ್ಕಿ ತೊಳೆದ ನೀರು ಅಥವಾ ತೆಂಗಿನಕಾಯಿ ನೀರು? ಬೇಸಿಗೆಯಲ್ಲಿ ಯಾವುದು ಉತ್ತಮ?
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=stlrX3U6wv8JI2zG











