ತಮಿಳು ನಾಡು : Tulu Times l ತಮಿಳುನಾಡು ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಮುಂದುವರಿದಿದ್ದ ರಾಜಕೀಯ ಅನಿಶ್ಚಿತತೆಗೆ ಕೊನೆಗೂ ತೆರೆಬಿದ್ದಿದೆ. ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಬಹುಮತದ ಮ್ಯಾಜಿಕ್ ಸಂಖ್ಯೆ 118 ಅನ್ನು ತಲುಪಿದ್ದು, ವಿಜಯ್ ನಾಳೆ (ಮೇ.09)ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಶುಕ್ರವಾರ ಸಂಜೆ ವಿಜಯ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದರು. ಇದಾದ ಬಳಿಕ ಚೆನ್ನೈನಲ್ಲಿರುವ ವಿಜಯ್ ನಿವಾಸದ ಮುಂದೆ ಸಾವಿರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸೇರಿ “ಟಿವಿಕೆ… ಟಿವಿಕೆ…” ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.

ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷವು 234 ಕ್ಷೇತ್ರಗಳಲ್ಲಿ 108 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಇದರೊಂದಿಗೆ ಕಳೆದ 62 ವರ್ಷಗಳಿಂದ ತಮಿಳುನಾಡಿನ ರಾಜಕೀಯದಲ್ಲಿ ಪ್ರಭಾವ ಬೀರಿದ್ದ ಡಿಎಂಕೆ ಮತ್ತು AIADMK ಪಕ್ಷಗಳ ದ್ವಿಪಕ್ಷೀಯ ಪ್ರಭುತ್ವಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಆದರೆ ಸರ್ಕಾರ ರಚಿಸಲು ಅಗತ್ಯವಿದ್ದ 118 ಸ್ಥಾನಗಳಿಗೆ ಟಿವಿಕೆ ಇನ್ನೂ 10 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿತ್ತು. ಬಹುಮತ ಸಾಬೀತಾದ ಬಳಿಕ ಮಾತ್ರ ಸರ್ಕಾರ ರಚಿಸಲು ಆಹ್ವಾನ ನೀಡುವುದಾಗಿ ರಾಜ್ಯಪಾಲರು ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿಜಯ್ ತ್ವರಿತ ರಾಜಕೀಯ ಮಾತುಕತೆಗಳನ್ನು ನಡೆಸಿದ್ದು, ಅಂತಿಮವಾಗಿ ಅಗತ್ಯ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯ್ ಅವರು ಮೇ 9ರಂದು ಬೆಳಗ್ಗೆ 11 ಗಂಟೆಗೆ ನೆಹರು ಸ್ಟೇಡಿಯಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ವಿಜಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಚಿತ್ರರಂಗದ ಸೂಪರ್‌ಸ್ಟಾರ್ ಆಗಿದ್ದ ವಿಜಯ್ ಈಗ ರಾಜಕೀಯದಲ್ಲೂ ಹೊಸ ಅಧ್ಯಾಯ ಆರಂಭಿಸುತ್ತಿದ್ದು, ತಮಿಳುನಾಡಿನ ರಾಜಕೀಯದಲ್ಲಿ ಇದು ಐತಿಹಾಸಿಕ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
Will Vijay take oath as Chief Minister on May 9th? – ತುಳುಟೈಮ್ಸ್
ಇದನ್ನೂ ಓದಿ :ಐಪಿಎಲ್ ಫೈನಲ್ ಸ್ಥಳಾಂತರ ಕೇವಲ ಕ್ರೀಡಾ ಚರ್ಚೆಯಲ್ಲ; ಅದು ವಾಣಿಜ್ಯ ಲೆಕ್ಕಾಚಾರ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=g3bf9_MRFaOYv3f4











