ಧರ್ಮಸ್ಥಳ – ತುಳು ಟೈಮ್ಸ್ : ಭಕ್ತರೊಬ್ಬರ ಬ್ಯಾಗ್ನಿಂದ ಬರೋಬ್ಬರಿ 97 ಗ್ರಾಮ್ ಚಿನ್ನಾಭರಣವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಮೇ 3 ರಂದು ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ಮೂಲದ ಬಿ.ಬಿ ಜಾನ್ ಮತ್ತು ಮಸಾಭಿ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು ರೂ.5 ಲಕ್ಷ 32 ಸಾವಿರ ಮೌಲ್ಯದ 76ಗ್ರಾಂ ಚಿನ್ನಾಭರಣಗಳನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೇ ತಿಂಗಳಲ್ಲಿ ನಡೆದಿದ್ದ ಕಳ್ಳತನ
ಆಂಧ್ರದ ನೆಲ್ಲೂರು ನಿವಾಸಿ ಜೆ.ಲತಾ ಅವರು ಕುಟುಂಬ ಸಮೇತ ಮೇ.3 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಬರೋಬ್ಬರಿ 97 ಗ್ರಾಂ ಚಿನ್ನಾಭರಣವನ್ನು ಬ್ಯಾಗಿನಲ್ಲಿರಿಸಿಕೊಂಡು ಬಂದಿದ್ದರು. ಬಳಿಕ ಉಡುಪಿ ಕಡೆ ಕೆಲಸದ ವಿಚಾರವಾಗಿ ಹೋಗುವಾಗ ಬ್ಯಾಗ್ ಅನ್ನು ಪರಿಶೀಲಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉಡುಪಿಯಿಂದ ಧರ್ಮಸ್ಥಳಕ್ಕೆ ವಾಪಾಸ್ ಆಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಇದನ್ನೂ ಓದಿ: ಕಡಬ: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು
ಧರ್ಮಸ್ಥಳ ಪೊಲೀಸರು ಪ್ರಕರಣದ ಬಗ್ಗೆ ವಿವಿಧ ಅಯಾಮಗಳಲ್ಲಿ ತನಿಖೆ ಮಾಡಿದ್ದಾರೆ. ಕೊನೆಗೂ ಆರೋಪಿಗಳನ್ನು ನ.23 ರಂದು ಧರ್ಮಸ್ಥಳದ ದ್ವಾರದ ಬಳಿ ಮತ್ತೆ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಿದ್ದಾರೆ. ಬಂಧಿತರು ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ ಸಟಲೆಂಟ್ 2 ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬಿ.ಬಿ.ಜಾನ್ (59) ಮತ್ತು ಮಗಳು ಮಸಾಭಿ @ ಆರತಿ (34) ಎಂದು ಗುರುತಿಸಲಾಗಿದೆ.
ನ.25 ರಂದು ಮಂಗಳವಾರ ಧರ್ಮಸ್ಥಳ ಪೊಲೀಸರು ಕಳ್ಳತನ ಮಾಡಿದ ಸುಮಾರು 5,32,000 ಸಾವಿರ ಮೌಲ್ಯದ 76 ಗ್ರಾಂ ಚಿನ್ನಾಭರಣ ಆರೋಪಿಗಳ ಹುಬ್ಬಳಿ ಮನೆಯಿಂದ ಮಹಜರು ನಡೆಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಬ್ಬರ ಮೇಲೆ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿ ಮಹಿಳೆಯರು ದೇವಾಲಯಗಳನ್ನು ಟಾರ್ಗೆಟ್ ಮಾಡಿ ಭಕ್ತಾಧಿಗಳ ಸೋಗಿನಲ್ಲಿ ಹೋಗಿ ಚಿನ್ನಾಭರಣ ಮತ್ತು ಹಣ ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ.
Dharmasthala Police have arrested two women accused of stealing 97 grams of gold ornaments from a devotee’s bag. Police have seized about 76 grams of gold ornaments from the arrested persons. Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











