ಕರ್ನಾಟಕ : Tulu Times l ರಾಜ್ಯದ ಮುಜರಾಯಿ ಇಲಾಖೆಯ ದೇವಸ್ಥಾನಗಳ ಹುಂಡಿಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ಸರ್ಕಾರ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ ಜಾರಿಗೆ ತಂದಿದೆ. ಹುಂಡಿಗಳಲ್ಲಿನ ಕಾಣಿಕೆಗಳ ಸುರಕ್ಷತೆ, ಪಾರದರ್ಶಕತೆ ಹಾಗೂ ಕಳ್ಳತನ ತಡೆಗಟ್ಟುವ ಉದ್ದೇಶದಿಂದ ಸಿಸಿಟಿವಿ ನಿಗಾ, ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಕಟ್ಟುನಿಟ್ಟಿನ ಹಣ ಎಣಿಕೆ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.
ಹೊಸ ಎಸ್‌ಒಪಿ ಪ್ರಕಾರ, ದೇವಸ್ಥಾನಗಳಲ್ಲಿರುವ ಹುಂಡಿಗಳನ್ನು ಎಲ್ಲರಿಗೂ ಸ್ಪಷ್ಟವಾಗಿ ಕಾಣುವ ಸ್ಥಳದಲ್ಲಿ ಅಳವಡಿಸಬೇಕು. ಅವುಗಳನ್ನು ನಾಲ್ಕು ದಿಕ್ಕುಗಳಿಂದ ಸಿಸಿಟಿವಿ ಕ್ಯಾಮೆರಾಗಳು ನಿರಂತರವಾಗಿ ಚಿತ್ರೀಕರಿಸುವಂತೆ ವ್ಯವಸ್ಥೆ ಮಾಡಬೇಕು. ಕ್ಯಾಮೆರಾ ದೃಶ್ಯಗಳು ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದಿಂದ ಮೇಲ್ವಿಚಾರಣೆಯಾಗಲಿದ್ದು, ಪೊಲೀಸ್ ಅಧೀಕ್ಷಕರ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳಿಗೂ ಡ್ಯಾಶ್‌ಬೋರ್ಡ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.
ಭಕ್ತರು ಯುಪಿಐ (UPI), ಭೀಮ್ (BHIM) ಹಾಗೂ ಕ್ಯೂಆರ್ (QR) ಕೋಡ್ ಮೂಲಕ ಕಾಣಿಕೆ ಸಲ್ಲಿಸಲು ಸರ್ಕಾರ ಉತ್ತೇಜನ ನೀಡಿದೆ. ಪ್ರಸಾದ, ಸೇವೆ ಹಾಗೂ ವಿಶೇಷ ಪೂಜೆಗಳ ಟಿಕೆಟ್‌ಗಳಿಗೂ ಡಿಜಿಟಲ್ ಪಾವತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹುಂಡಿ ಇರುವ ಸ್ಥಳಗಳಲ್ಲೇ ಬ್ಯಾಂಕ್ ಖಾತೆ ವಿವರಗಳಿರುವ QR ಕೋಡ್‌ಗಳನ್ನು ಪ್ರದರ್ಶಿಸಬೇಕು. ಅವುಗಳಲ್ಲಿ ಯಾವುದೇ ರೀತಿಯ ತಿರುಚಾಟ ಅಥವಾ ಬದಲಾವಣೆ ಆಗದಂತೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ.

ಹೆಚ್ಚಿನ ಕಾಣಿಕೆ ಬರುವ ದೇವಸ್ಥಾನಗಳಲ್ಲಿ ವಾರಕ್ಕೊಮ್ಮೆ ಹಾಗೂ ಮಧ್ಯಮ ಅಥವಾ ಕಡಿಮೆ ಆದಾಯದ ದೇವಸ್ಥಾನಗಳಲ್ಲಿ ಹದಿನೈದು ದಿನಕ್ಕೊಮ್ಮೆ ಹುಂಡಿ ತೆರೆಯಿಸಿ ಹಣ ಎಣಿಕೆ ನಡೆಸಬೇಕು. ಈ ಪ್ರಕ್ರಿಯೆ ಸ್ಥಳೀಯ ತಹಶೀಲ್ದಾರ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಹುಂಡಿ ತೆರೆಯುವುದರಿಂದ ಹಿಡಿದು ಹಣ ಎಣಿಕೆ ಮಾಡಿ ಬ್ಯಾಂಕ್‌ಗೆ ಜಮಾ ಮಾಡುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಸಿಸಿಟಿವಿ ಹಾಗೂ ವಿಡಿಯೊದಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ. ಅಗತ್ಯವಿದ್ದಲ್ಲಿ ಹೋಮ್‌ಗಾರ್ಡ್ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು ಹಾಗೂ ಇತರೆ ಸರ್ಕಾರಿ ನೌಕರರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.
ಹುಂಡಿ ನಿರ್ವಹಣೆ ಅಥವಾ ಹಣ ಎಣಿಕೆ ವೇಳೆ ಯಾವುದೇ ಲೋಪ, ಅಕ್ರಮ ಅಥವಾ ಕಳ್ಳತನ ನಡೆದರೆ ಸಂಬಂಧಪಟ್ಟ ದೇವಸ್ಥಾನದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೇ ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುತ್ತದೆ ಎಂದು ಎಸ್‌ಒಪಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹೊಸ ಕ್ರಮಗಳ ಮೂಲಕ ದೇವಸ್ಥಾನಗಳ ಕಾಣಿಕೆ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಭಕ್ತರ ವಿಶ್ವಾಸವನ್ನು ಬಲಪಡಿಸುವುದು ಹಾಗೂ ಕಳ್ಳತನ ಮತ್ತು ದುರುಪಯೋಗಕ್ಕೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ.
Tight security for temple hundis: CCTV, QR code mandatory – ತುಳುಟೈಮ್ಸ್
ಇದನ್ನೂ ಓದಿ :ಕರಿಮೆಣಸು: ರೈತರ ಪಾಲಿನ ಕಪ್ಪು ಚಿನ್ನ, ಉತ್ತಮ ಆದಾಯದ ಬೆಳೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=FIQw7zzRyIiC2wI5











