ಕ್ರಿಕೆಟ್ : Tulu Times l ಭಾರತದ ಯುವ ಕ್ರಿಕೆಟಿಗ, ಸಂಚಲನ ಮೂಡಿಸುತ್ತಿರುವ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ಪಾದಾರ್ಪಣೆ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರ ತಿಲಕ್ ವರ್ಮಾ ಅವರು ವೈಭವ್ಗೆ ಭಾರತ ತಂಡದ ಕ್ಯಾಪ್ ಪ್ರದಾನ ಮಾಡಿದರು. ಈ ಮೂಲಕ 1989ರಲ್ಲಿ 16 ವರ್ಷ 205 ದಿನಗಳ ವಯಸ್ಸಿನಲ್ಲಿ ಭಾರತ ಪರ ಹೆಜ್ಜೆಯನ್ನಿಟ್ಟ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ.

ಐಪಿಎಲ್ನಿಂದ ಟೀಂ ಇಂಡಿಯಾಗೆ ;
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಅವರು 16 ಪಂದ್ಯಗಳಲ್ಲಿ 776 ರನ್ ಗಳಿಸಿ ಆರೆಂಜ್ ಕ್ಯಾಪ್ ವಿಜೇತರಾಗಿದ್ದರು. ಜೊತೆಗೆ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಹಾಗೂ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಗಳನ್ನು ಒಂದೇ ಆವೃತ್ತಿಯಲ್ಲಿ ಗೆದ್ದ ಮೊದಲ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದ್ದರು.
ಬಾಲ್ಯದಿಂದಲೇ ದಾಖಲೆಗಳ ಸರಮಾಲೆ;
ಬಿಹಾರದ ಸಮಸ್ತಿಪುರ ಜಿಲ್ಲೆಯ ತಾಜ್ಪುರ ಮೂಲದ ವೈಭವ್ 2024ರಲ್ಲಿ ಕೇವಲ 12 ವರ್ಷ 284 ದಿನಗಳ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದು ಆಸ್ಟ್ರೇಲಿಯಾ ವಿರುದ್ಧದ ಯುವ ಟೆಸ್ಟ್ನಲ್ಲಿ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. ನಂತರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ₹1.10 ಕೋಟಿಗೆ ಅವರನ್ನು ಖರೀದಿಸಿತ್ತು. ಕೇವಲ 13ನೇ ವಯಸ್ಸಿನಲ್ಲೇ ಐಪಿಎಲ್ ಒಪ್ಪಂದ ಪಡೆದ ಅತೀ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯೂ ಅವರಿಗೆ ಸಿಕ್ಕಿತ್ತು. ಐಪಿಎಲ್ ಯಶಸ್ಸಿಗೂ ಮುನ್ನವೇ, ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದರು. ಆ ಟೂರ್ನಿಯಲ್ಲಿ ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿಯನ್ನೂ ಗೆದ್ದಿದ್ದರು. ಇದೀಗ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡುವ ಮೂಲಕ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್ನಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯ ಬರೆದಿದ್ದಾರೆ.
New star enters Team India; 15-year-old boy breaks Sachin’s record. – ತುಳು ಟೈಮ್ಸ್
ಇದನ್ನೂ ಓದಿ : ನಗುವವನನ್ನು ಸೋಲಿಸುವುದು ಸುಲಭವಲ್ಲ; ಏಕೆ ಗೊತ್ತಾ?
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtube.com/shorts/SbFyw13ZxBo?feature=share











