ನವದೆಹಲಿ : Tulu Times |ಭಾರತದಲ್ಲಿ ಅಲ್ಟ್ರಾ–ಪ್ರೊಸೆಸ್ಡ್ ಆಹಾರಗಳ (UPF) ಸೇವನೆ ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಆಹಾರಗಳನ್ನು ಗರಿಷ್ಠ ಜಿಎಸ್‌ಟಿ ಶ್ರೇಣಿಗೆ ಸೇರಿಸುವಂತೆ ಹಾಗೂ ಹೆಚ್ಚು ಸಕ್ಕರೆ, ಉಪ್ಪು ಮತ್ತು ಕೊಬ್ಬು ಹೊಂದಿರುವ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವಂತೆ ಆರ್ಥಿಕ ಸಮೀಕ್ಷೆ 2025–26 ಶಿಫಾರಸು ಮಾಡಿದೆ. ಈ ಸಮೀಕ್ಷೆಯನ್ನು ಜನವರಿ 29ರಂದು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ಪ್ಯಾಕೆಟ್ ಆಹಾರಗಳ ಮೇಲೆ ಪ್ರಸ್ತುತ ಜಾರಿಯಲ್ಲಿರುವ ‘ಹೆಲ್ತ್ ಸ್ಟಾರ್ ರೇಟಿಂಗ್’ ವ್ಯವಸ್ಥೆಯನ್ನು ರದ್ದುಪಡಿಸಿ, ಅದರ ಬದಲು ಮುಂಭಾಗದಲ್ಲೇ ಸ್ಪಷ್ಟ ಎಚ್ಚರಿಕೆ ಲೇಬಲ್‌ಗಳನ್ನು (Front-of-Pack Warning Labels) ಅಳವಡಿಸಬೇಕೆಂದು ಸಮೀಕ್ಷೆ ಸಲಹೆ ನೀಡಿದೆ. ರೇಟಿಂಗ್ ಮಾದರಿಯ ಲೇಬಲ್‌ಗಳು ಆರೋಗ್ಯದ ಅಪಾಯವನ್ನು ಮಸುಕುಗೊಳಿಸುತ್ತವೆ ಮತ್ತು ಗ್ರಾಹಕರನ್ನು ತಪ್ಪು ದಾರಿಗೆ ನಡಿಸಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಈ ನಿಲುವನ್ನು ನ್ಯೂಟ್ರಿಷನ್ ಅಡ್ವೊಕೆಸಿ ಇನ್ ಇಂಡಿಯಾ (NAPI) ಸೇರಿದಂತೆ ಹಲವು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ವರ್ಷಗಳಿಂದ ಒತ್ತಾಯಿಸುತ್ತಿವೆ. ಭಾರತದಲ್ಲಿ ಸ್ಥೂಲಕಾಯತೆ (ಒಬೆಸಿಟಿ) ವೇಗವಾಗಿ ಹೆಚ್ಚುತ್ತಿದ್ದು, ಇದು ಕಳೆದ ಎರಡು ದಶಕಗಳಲ್ಲಿ UPF ಸೇವನೆಯ ಭಾರೀ ವೃದ್ಧಿಯೊಂದಿಗೆ ನೇರವಾಗಿ ಸಂಬಂಧಿಸಿದೆ ಎಂದು ಸಮೀಕ್ಷೆ ಹೇಳಿದೆ. 2019–21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ, ದೇಶದ ಮಹಿಳೆಯರಲ್ಲಿ 24% ಮತ್ತು ಪುರುಷರಲ್ಲಿ 23% ಜನರು ಅತೀ ತೂಕ ಅಥವಾ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. 15–49 ವಯೋಮಾನದ ಮಹಿಳೆಯರಲ್ಲಿ 6.4% ಮಂದಿ ಸ್ಥೂಲಕಾಯರಾಗಿದ್ದರೆ, ಪುರುಷರಲ್ಲಿ ಇದು 4% ಆಗಿದೆ.
ಮಕ್ಕಳಲ್ಲಿ ಪರಿಸ್ಥಿತಿ ಇನ್ನಷ್ಟು ಕಳವಳಕಾರಿ ಎನ್ನಲಾಗಿದೆ.
ಉದಾಹರಣೆಗೆ ಕೆಲವು ದೇಶ ಉಲ್ಲೇಖಿಸಿರುವ ಸಮೀಕ್ಷೆಯಲ್ಲಿ, ಸಮಗ್ರ ಆಹಾರ ಕಾನೂನುಗಳು ಮತ್ತು ಜಾಹೀರಾತು ನಿಯಂತ್ರಣ ಜಾರಿಯಲ್ಲಿವೆ ಎಂದು ತಿಳಿಸಿದೆ. ಇತ್ತೀಚೆಗೆ ಯುಕೆಯಲ್ಲಿ ಮಕ್ಕಳ ಮೇಲಿನ ಪ್ರಭಾವ ಕಡಿಮೆ ಮಾಡುವ ಉದ್ದೇಶದಿಂದ, ರಾತ್ರಿ 9 ಗಂಟೆಯ ಮೊದಲು ಜಂಕ್ ಫುಡ್ ಜಾಹೀರಾತುಗಳನ್ನು ಟಿವಿ ಮತ್ತು ಆನ್‌ಲೈನ್ ಮಾಧ್ಯಮಗಳಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿಯೂ ಡಿಜಿಟಲ್ ಮಾಧ್ಯಮಗಳು, ಶಾಲಾ–ಕಾಲೇಜು ಕಾರ್ಯಕ್ರಮಗಳ ಪ್ರಾಯೋಜಕತ್ವ ಸೇರಿದಂತೆ UPF ಕಂಪನಿಗಳ ಪ್ರಚಾರದ ಮೇಲೆ ನಿಯಂತ್ರಣ ಹೇರಬೇಕು ಎಂದು ಸಮೀಕ್ಷೆ ಸೂಚಿಸಿದೆ.
Economic Survey 2025-26: Consumption of ultra-processed food increases sharply – ತುಳು ಟೈಮ್ಸ್
ಇದನ್ನೂ ಓದಿ : ಪ್ರೈವೇಟ್ ಬಸ್ ಗಳಿಗೆ ಕಡ್ಡಾಯ ಬಾಗಿಲು ಅಳವಡಿಕೆ : ಜೂ.01 ರವರೆಗೆ ಗಡುವು
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/yyHI_WJ6OnU?si=T-3ZJ4R-wWFxpMEN











