ಸುಳ್ಯ: Tulu Times l ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಬೆಳ್ಳಿಹಬ್ಬದ ಅಂಗವಾಗಿ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದಿಂದ ಆಗಸ್ಟ್ 7, 8 ಮತ್ತು 9ರಂದು ಆರೋಗ್ಯ ಪಾದಕ್ಕಾಗಿ ಕಾಲು ನಡಿಗೆ ಜಾಥಾ, ಉಚಿತ ಡಯಾಬಿಟಿಕ್ ಫುಟ್ ಕ್ಯಾಂಪ್ ಹಾಗೂ ರಾಜ್ಯಮಟ್ಟದ ‘ಮಿಡ್ಕಾನ್–2026’ ವೈದ್ಯಕೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಎಒಎಲ್ಇ (ರಿ.) ಸುಳ್ಯ ಅಧ್ಯಕ್ಷ ಹಾಗೂ ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ. ಕೆ.ವಿ. ಚಿದಾನಂದ, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಗೋಪಿನಾಥ್ ಹಾಗೂ ಸ್ತ್ರೀರೋಗ ತಜ್ಞೆ ಡಾ. ಗೀತಾ ದೊಪ್ಪ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ರೋಗಿಗಳ ಪಾದದ ಒತ್ತಡದ ಬಿಂದುಗಳನ್ನು ಗುರುತಿಸುವ ಡಿಜಿಟಲ್ ಪರೀಕ್ಷೆ ;
ಆಗಸ್ಟ್ 7ರಂದು ಬೆಳಗ್ಗೆ 8 ಗಂಟೆಗೆ ಕಾಲೇಜು ಆವರಣದಿಂದ ಸುಳ್ಯ ನಗರದಲ್ಲಿ ‘ಆರೋಗ್ಯ ಪಾದಕ್ಕಾಗಿ ಕಾಲು ನಡಿಗೆ’ ಜಾಥಾ ನಡೆಯಲಿದೆ. ಕರ್ನಾಟಕದ ಶಸ್ತ್ರಚಿಕಿತ್ಸಕರ ಸಂಘ ಹಾಗೂ ಇಂಡಿಯನ್ ಪೋಡಿಯಾಟ್ರಿ ಅಸೋಸಿಯೇಷನ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಾಥಾ ಬಳಿಕ ಬೆಳಗ್ಗೆ 10 ಗಂಟೆಯಿಂದ ನಡೆಯುವ ಡಯಾಬಿಟಿಕ್ ಫುಟ್ ಕ್ಯಾಂಪ್ನಲ್ಲಿ ಮಧುಮೇಹ ರೋಗಿಗಳ ಕಾಲು ಮತ್ತು ಪಾದಗಳ ವಿಶೇಷ ತಪಾಸಣೆ ಉಚಿತವಾಗಿ ನಡೆಯಲಿದೆ. ಬೆಂಗಳೂರಿನ ಕಾಲು ಮತ್ತು ಪಾದ ಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರದೀಪ್ ಹಾಗೂ ಅವರ ತಂಡ ಮಧುಮೇಹ ರೋಗಿಗಳ ಪಾದದ ಒತ್ತಡದ ಬಿಂದುಗಳನ್ನು ಗುರುತಿಸುವ ಡಿಜಿಟಲ್ ಪರೀಕ್ಷೆ, ಪಾದದ ರಕ್ತಸಂಚಾರವನ್ನು ಡಾಪ್ಲರ್ ಮೂಲಕ ಪರಿಶೀಲನೆ, ಸ್ಪರ್ಶಜ್ಞಾನ ಪರೀಕ್ಷೆ ಹಾಗೂ ಪಾದದ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡಲಿದ್ದಾರೆ. ಮಧುಮೇಹಕ್ಕೆ ಸಂಬಂಧಿಸಿದ ರಕ್ತ ಪರೀಕ್ಷೆಗಳನ್ನೂ ಉಚಿತವಾಗಿ ನಡೆಸಲಾಗುತ್ತದೆ.

ರಾಜ್ಯಮಟ್ಟದ ವೈದ್ಯಕೀಯ ಸಮ್ಮೇಳನ ;
ಆಗಸ್ಟ್ 8 ಮತ್ತು 9ರಂದು ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಕರ್ನಾಟಕ ಶಸ್ತ್ರಚಿಕಿತ್ಸಾ ತಜ್ಞರ ಸಂಘದ ವತಿಯಿಂದ ಪ್ರಥಮ ಬಾರಿಗೆ ‘ಮಿಡ್ಕಾನ್–2026’ ರಾಜ್ಯಮಟ್ಟದ ವೈದ್ಯಕೀಯ ಸಮ್ಮೇಳನ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಶಸ್ತ್ರಚಿಕಿತ್ಸಾ ತಜ್ಞರು, ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರು, ಕೆವಿಜಿ ಮೆಡಿಕಲ್, ನರ್ಸಿಂಗ್, ಆಯುರ್ವೇದ ಹಾಗೂ ಫಿಜಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು, ಸುಳ್ಯದ ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಸದಸ್ಯರು ಸಹಭಾಗಿಯಾಗಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ರಂಜಿತ್ ಹಾಗೂ ಡಾ. ಸಾಯಿಗೀತಾ ಉಪಸ್ಥಿತರಿದ್ದರು.
2026; State Surgeons Conference – ತುಳುಟೈಮ್ಸ್
ಇದನ್ನೂ ಓದಿ :ಸುಳ್ಯ : ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಕ್ರಮ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IKW_z7twgxc











