ಬೆಂಗಳೂರು : Tulu Times l ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪೋಲಿಯೋ ರೋಗದಿಂದ ಸಂಪೂರ್ಣವಾಗಿ ರಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಇಂದು (ಭಾನುವಾರ) ರಾಜ್ಯಾದ್ಯಂತ ಆರಂಭವಾಗಿದೆ. ರಾಜ್ಯದ ಸುಮಾರು 64.84 ಲಕ್ಷ ಮಕ್ಕಳಿಗೆ ಪೊಲಿಯೊ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದ್ದು, ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದೆ.
ಈ ಬಾರಿ ರಾಜ್ಯದಾದ್ಯಂತ 36,076 ಲಸಿಕಾ ಕೇಂದ್ರಗಳು ಮತ್ತು ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲದೆ, ಮೆಟ್ರೋ ನಿಲ್ದಾಣಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಸೇರಿದಂತೆ ಜನರು ಹೆಚ್ಚು ಓಡಾಡುವ ಸ್ಥಳಗಳಲ್ಲಿಯೂ ವಿಶೇಷ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರಿಂದ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಪೋಷಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಆರೋಗ್ಯ ಇಲಾಖೆ ‘Nearby Vaccination’ ಎಂಬ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದೆ. ಈ ಆ್ಯಪ್ ಮೂಲಕ ತಮ್ಮ ಮನೆಗೆ ಸಮೀಪದ ಲಸಿಕಾ ಕೇಂದ್ರವನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.
ಪಲ್ಸ್ ಪೋಲಿಯೋ ಅಭಿಯಾನದಡಿ ಪ್ರತಿ ಮಗುವಿಗೂ ಬಾಯಿಯ ಮೂಲಕ ಎರಡು ಹನಿ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಮಗು ಈ ಹಿಂದೆ ಪೋಲಿಯೋ ಲಸಿಕೆ ಪಡೆದಿದ್ದರೂ ಸಹ, ಅಭಿಯಾನದ ದಿನ ಮತ್ತೆ ಎರಡು ಹನಿ ಲಸಿಕೆ ನೀಡುವುದು ಅತ್ಯಗತ್ಯ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಇದರಿಂದ ಪೋಲಿಯೋ ವಿರುದ್ಧ ರೋಗನಿರೋಧಕ ಶಕ್ತಿ ಮತ್ತಷ್ಟು ಬಲವಾಗುತ್ತದೆ.
ಪೋಲಿಯೋ ವೈರಸ್ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದಾದ ಗಂಭೀರ ಕಾಯಿಲೆಯಾಗಿದ್ದು, ಲಸಿಕೆಯ ಮೂಲಕ ಇದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಭಾರತವು ಪೋಲಿಯೋ ಮುಕ್ತ ರಾಷ್ಟ್ರದ ಸ್ಥಾನಮಾನವನ್ನು ಕಾಯ್ದುಕೊಳ್ಳಲು ಇಂತಹ ಲಸಿಕಾ ಅಭಿಯಾನಗಳು ಅತ್ಯಂತ ಮಹತ್ವದ್ದಾಗಿವೆ. ಆದ್ದರಿಂದ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳ ಪೋಷಕರು ಇಂದು ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ, ತಮ್ಮ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಅವರ ಆರೋಗ್ಯಕರ ಭವಿಷ್ಯವನ್ನು ಸುರಕ್ಷಿತಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಮತ್ತೊಮ್ಮೆ ಮನವಿ ಮಾಡಿದೆ.
Pulse polio; Two drops of vaccine for children under 5 years of age – ತುಳು ಟೈಮ್ಸ್
ಇದನ್ನೂ ಓದಿ : ಜ್ವರ ಇಳಿದರೆ ಡೆಂಗ್ಯೂ ಗುಣವಾಗಿದೆ ಎಂದುಕೊಳ್ಳಬೇಡಿ : ವೈದ್ಯರ ಎಚ್ಚರಿಕೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/zA_oUB7Mz7E











