ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಟ್ವಿಶಾ ಶರ್ಮಾ ಸಾವು ಪ್ರಕರಣ: ಪತಿಯ ತಾಯಿ ಮಾಜಿ ನ್ಯಾಯಾಧೀಶೆ ಬಂಧನ

ಭೋಪಾಲ್: Tulu Times l ಕೇಂದ್ರೀಯ ತನಿಖಾ ದಳ (ಸಿಬಿಐ) ಟ್ವಿಶಾ ಶರ್ಮಾ ಸಾವು ಪ್ರಕರಣದಲ್ಲಿ ಅವರ ಅತ್ತೆಯಾಗಿರುವ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಗುರುವಾರ ಭೋಪಾಲ್‌ನಲ್ಲಿ ಬಂಧಿಸಿದೆ. ಈ ಬಂಧನಕ್ಕೂ ಒಂದು ದಿನ ಮೊದಲು, ಮಧ್ಯಪ್ರದೇಶ ಹೈಕೋರ್ಟ್ ಗಿರಿಬಾಲಾ ಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರದ್ದುಗೊಳಿಸಿತ್ತು. ಜೊತೆಗೆ ಮೇ 15ರಂದು ಭೋಪಾಲ್‌ನ 10ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ಜಾಮೀನು ರಕ್ಷಣೆಯನ್ನೂ ಹೈಕೋರ್ಟ್ ರದ್ದುಪಡಿಸಿತ್ತು.

ಮಧ್ಯಪ್ರದೇಶದ ಅಡ್ವೊಕೇಟ್ ಜನರಲ್ ಪ್ರಶಾಂತ್ ಸಿಂಗ್ ಮಾತನಾಡಿ, ಟ್ವಿಶಾ ಶರ್ಮಾ ದೇಹದಲ್ಲಿ ಏಳು ಆಂಟೆಮಾರ್ಟಂ ಗಾಯಗಳು (ವ್ಯಕ್ತಿ ಜೀವಂತವಾಗಿರುವಾಗಲೇ ಉಂಟಾದ ಗಾಯಗಳು) ಕಂಡುಬಂದಿದ್ದು ಗಂಭೀರ ಅಪರಾಧದ ಸೂಚನೆ ನೀಡುತ್ತದೆ. ಗಿರಿಬಾಲಾ ಸಿಂಗ್ ಹಲವು ನೋಟಿಸ್‌ಗಳಿದ್ದರೂ ತನಿಖೆಗೆ ಸಹಕರಿಸಿಲ್ಲ. ಜೊತೆಗೆ ವಾಟ್ಸಾಪ್ ಚಾಟ್‌ಗಳಲ್ಲಿ ಟ್ವಿಶಾ ಮೇಲೆ ಮಾನಸಿಕ ಹಿಂಸೆ ನೀಡಿದ ಸುಳಿವುಗಳಿವೆ. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ಜಾಮೀನು ತಿರಸ್ಕರಿಸಿದೆ, ಎಂದು ಹೇಳಿದರು.

ನ್ಯಾಯಾಲಯದ ವಿಚಾರಣೆಯ ವೇಳೆ ಟ್ವಿಶಾ ಕುಟುಂಬದ ಪರ ವಕೀಲರು, ಮದುವೆಯಾದ ಬಳಿಕ ಟ್ವಿಶಾ ನಿರಂತರ ಮಾನಸಿಕ ಹಿಂಸೆಗೆ ಒಳಗಾಗಿದ್ದಳು ಮತ್ತು ವೈವಾಹಿಕ ಜೀವನದಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಳು ಎಂದು ವಾದಿಸಿದರು. ಟ್ವಿಶಾ ಅವರ ಪೋಷಕರು ಮತ್ತು ಸಂಬಂಧಿಕರ ಹೇಳಿಕೆಗಳಲ್ಲಿಯೂ ಆರಂಭದಿಂದಲೇ ಗಿರಿಬಾಲಾ ಸಿಂಗ್ ಹಾಗೂ ಟ್ವಿಶಾ ಪತಿ ಸಮರ್ಥ್ ಸಿಂಗ್ ವಿರುದ್ಧ ಹಿಂಸೆ ಆರೋಪಗಳಿವೆ ಎಂದು ಹೈಕೋರ್ಟ್ ಗಮನಿಸಿದೆ. ಹೈಕೋರ್ಟ್ ಮತ್ತೊಂದು ಗಂಭೀರ ಅಂಶವನ್ನೂ ಉಲ್ಲೇಖಿಸಿದೆ. ಸೈಬರ್ ಕ್ರೈಂ, ಸೈಬರ್ ಫಾರೆನ್ಸಿಕ್ ಮತ್ತು ಕ್ರೈಂ ಸೀನ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ಪಡೆದ ನಿವೃತ್ತ ನ್ಯಾಯಾಧೀಶೆಯಾಗಿರುವ ಗಿರಿಬಾಲಾ ಸಿಂಗ್ ತಮ್ಮ ಪರಿಣತಿಯನ್ನು ಬಳಸಿಕೊಂಡು ಸಾಕ್ಷ್ಯಗಳಲ್ಲಿ ತಿರುಚಾಟ ನಡೆಸಿರುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ನಡುವೆ, ಸುಮಾರು 10 ದಿನಗಳಿಂದ ತಲೆಮರೆಸಿಕೊಂಡಿದ್ದ ಟ್ವಿಶಾ ಪತಿ ಸಮರ್ಥ್ ಸಿಂಗ್ ಕಳೆದ ವಾರ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಗಿರಿಬಾಲಾ ಸಿಂಗ್ ಹಾಗೂ ಅವರ ಪುತ್ರ ಸಮರ್ಥ್ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಆರೋಪಗಳು ದಾಖಲಾಗಿವೆ. ಮೇ 12ರಂದು ಟ್ವಿಶಾ ಶರ್ಮಾ ಅವರ ಮೃತದೇಹವು ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐ ಸೋಮವಾರ ಅಧಿಕೃತವಾಗಿ ವಹಿಸಿಕೊಂಡಿದೆ. ರಾಜ್ಯ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ಅನ್ನು ಸಿಬಿಐ ಮರು ನೋಂದಣಿ ಮಾಡಿಕೊಂಡಿದೆ. ಸಿಬಿಐ ಎಫ್ ಐಆರ್ ಪ್ರಕಾರ, ಟ್ವಿಶಾ ಮದುವೆ ವೇಳೆ ‘ವಿದಾಯ’ ಸಂದರ್ಭದಲ್ಲಿ ಗಿರಿಬಾಲಾ ಸಿಂಗ್ ₹2 ಲಕ್ಷ ಹಣವನ್ನು ಬೇಡಿಕೆ ಇಟ್ಟಿದ್ದು, ಅದನ್ನು ಟ್ವಿಶಾ ಕುಟುಂಬ ಒದಗಿಸಿತ್ತು ಎಂದು ಆರೋಪಿಸಲಾಗಿದೆ.

Twisha Sharma death case: Husband’s mother, former judge, arrested – ತುಳು ಟೈಮ್ಸ್

ಇದನ್ನೂ ಓದಿ : ವಿನೇಶ್ ಫೋಗಟ್ ವಿವಾದ: ನ್ಯಾಯಾಂಗ ಹಸ್ತಕ್ಷೇಪ ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕುಸ್ತಿ ಫೆಡರೇಶನ್

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/EYKaZkoL8Qk?si=0kWbf0EJ9nWCRuOY

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 177

You cannot copy content of this page