ಬ್ರೇಕಿಂಗ್ ನ್ಯೂಸ್
ಕರ್ನಾಟಕ

ರೇಬೀಸ್ ಮತ್ತು ಅಪಾಯಕಾರಿ ಬೀದಿ ನಾಯಿಗಳಿಗೆ ಕಠಿಣ ಕ್ರಮ ಜಾರಿ : ಸುಪ್ರೀಂ ಕೋರ್ಟ್

ನವದೆಹಲಿ : Tulu Times l ಬೀದಿ ನಾಯಿಗಳ ಹಾವಳಿ ಮತ್ತು ನಾಯಿಕಚ್ಚುವಿಕೆ ಪ್ರಕರಣಗಳ ಹೆಚ್ಚಳದ ನಡುವೆ, ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು, ರೇಬೀಸ್ ಸೋಂಕಿತ ಹಾಗೂ ಅಪಾಯಕಾರಿ ಸ್ವಭಾವದ ಬೀದಿ ನಾಯಿಗಳಿಗೆ ಕಾನೂನುಬದ್ಧವಾಗಿ ಮರಣದಂಡನೆ ನೀಡಲು ಅಧಿಕಾರಿಗಳಿಗೆ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಂನಾತ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ ಅಂಜಾರಿಯ ಅವರಿದ್ದ ಪೀಠವು, ಬೀದಿ ನಾಯಿಗಳ ಸ್ಥಳಾಂತರ ಕುರಿತ ತನ್ನ ಹಿಂದಿನ ಆದೇಶದಲ್ಲಿ ತಿದ್ದುಪಡಿ ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ವಜಾಗೊಳಿಸಿ ಈ ಆದೇಶ ನೀಡಿದೆ. ಮಾನವ ಜೀವ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ, ಗುಣಪಡಿಸಲಾಗದ ರೋಗಪೀಡಿತ, ರೇಬೀಸ್ ಸೋಂಕಿತ ಅಥವಾ ಸ್ಪಷ್ಟವಾಗಿ ಹಿಂಸಾತ್ಮಕ ಹಾಗೂ ಅಪಾಯಕಾರಿ ನಾಯಿಗಳ ವಿರುದ್ಧ, ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು ಹಾಗೂ ಇತರೆ ಕಾನೂನು ಪ್ರೋಟೋಕಾಲ್‌ಗಳ ಅನ್ವಯ ಕಾನೂನುಬದ್ಧ ಕ್ರಮಗಳನ್ನು, ಅಗತ್ಯವಿದ್ದರೆ ಯೂಥನೇಷಿಯಾ ಸೇರಿದಂತೆ, ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಹೆಚ್ಚುತ್ತಿರುವ ಹಾವಳಿಯನ್ನು ಅಲಾರ್ಮಿಂಗ್ ಎಂದು ವರ್ಣಿಸಿದ ನ್ಯಾಯಪೀಠ, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಮೇಲೆ ನಡೆದಿರುವ ದಾಳಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನಾಯಿಕಚ್ಚುವಿಕೆ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವ ಕುರಿತು ಹಿಂದಿನ ನಿರ್ದೇಶನಗಳಲ್ಲಿ ಬದಲಾವಣೆ ಮಾಡಲು ಕೋರ್ಟ್ ನಿರಾಕರಿಸಿದೆ.

ಕಳೆದ ವರ್ಷ ಸುಪ್ರೀಂ ಕೋರ್ಟ್ ಆಸ್ಪತ್ರೆಗಳು, ಉದ್ಯಾನವನಗಳು, ರೈಲು ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು ಆದೇಶಿಸಿತ್ತು. ಅಲ್ಲದೆ, ಶಸ್ತ್ರಚಿಕಿತ್ಸೆ ಮೂಲಕ ಸಂತಾನೋತ್ಪತ್ತಿ ನಿಯಂತ್ರಣ ಮಾಡಿದ ಬಳಿಕ ಅವುಗಳನ್ನು ಮತ್ತೆ ಅದೇ ಪ್ರದೇಶಕ್ಕೆ ಬಿಡಬಾರದು ಎಂದು ನಿರ್ದೇಶನ ನೀಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದಕ್ಕೂ ನಿಷೇಧ ವಿಧಿಸಲಾಗಿದ್ದು, ಸರ್ಕಾರ ನಿಗದಿಪಡಿಸಿದ ಪ್ರದೇಶಗಳಲ್ಲಿ ಮಾತ್ರ ಆಹಾರ ನೀಡಲು ಅವಕಾಶ ನೀಡಲಾಗಿತ್ತು. ಈ ಮಧ್ಯೆ, ಕೆಲವು ಎನ್‌ಜಿಒಗಳು ಹಾಗೂ ಪ್ರಾಣಿಪ್ರೇಮಿಗಳು ಈ ಆದೇಶದಲ್ಲಿ ತಿದ್ದುಪಡಿ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಪೀಠವು ಆ ಅರ್ಜಿಗಳನ್ನು ವಜಾಗೊಳಿಸಿದೆ.

Strict action to be taken against rabies and dangerous stray dogs: Supreme Court – ತುಳುಟೈಮ್ಸ್

ಇದನ್ನೂ ಓದಿ :ವಿದೇಶಿ ಸರ್ವರ್‌ಗಳಲ್ಲಿ ಸಂಗ್ರಹಿತ ಭಾರತೀಯರ ಡೇಟಾ ಕಳುವು

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=-dzjm64e2fhkySnx

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 174

You cannot copy content of this page