ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಖಾಲಿ ಮನೆಗಳ ಭದ್ರತೆಗೆ ಉಡುಪಿ ಪೊಲೀಸರ ಹೊಸ ಯೋಜನೆ ಏನು?

ಉಡುಪಿ : Tulu Times l ಮನೆಯವರು ಪ್ರವಾಸ, ಉದ್ಯೋಗ ಅಥವಾ ಇತರ ಕಾರಣಗಳಿಂದ ಹೊರಗಡೆ ತೆರಳಿದಾಗ ಖಾಲಿ ಮನೆಗಳ ಭದ್ರತೆ ದೊಡ್ಡ ಚಿಂತೆಯಾಗುತ್ತದೆ. ಈ ಹಿನ್ನೆಲೆ ಉಡುಪಿ‌ ಜಿಲ್ಲಾ ಪೋಲಿಸ್ ಇಲಾಖೆ ಹೊಸ ಹಾಗೂ ವಿನೂತನ ಭದ್ರತಾ ಯೋಜನೆಯನ್ನು ಜಾರಿಗೆ ತಂದಿದೆ. ‘ಲಾಕ್‌ಡ್ ಹೌಸ್ ಬೀಟ್ ಸಿಸ್ಟಮ್’ ಹೆಸರಿನ ಈ ಯೋಜನೆ, ಮನೆಗಳು ಖಾಲಿಯಾಗಿರುವ ಸಮಯದಲ್ಲಿ ಕಳ್ಳತನ ಮತ್ತು ಅನಾಹುತಗಳನ್ನು ತಡೆಯುವ ಉದ್ದೇಶ ಹೊಂದಿದೆ.

ಈ ಯೋಜನೆಯಡಿ, ಮನೆಯವರು ತಮ್ಮ ಮನೆಗಳನ್ನು ಲಾಕ್ ಮಾಡಿ ಹೊರಗಡೆ ಹೋಗುವ ಮುನ್ನ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ನಂತರ ಸಂಬಂಧಿತ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಆ ಮನೆಗಳ ಮೇಲೆ ವಿಶೇಷ ನಿಗಾ ವಹಿಸಲಿದ್ದಾರೆ. ಹಗಲು ಮತ್ತು ರಾತ್ರಿ ಎರಡೂ ವೇಳೆಯಲ್ಲಿ ಪೊಲೀಸರು ಮನೆಗಳ ಪರಿಶೀಲನೆ ನಡೆಸಿ ಭದ್ರತೆಯನ್ನು ಖಚಿತಪಡಿಸಲಿದ್ದಾರೆ. ಉಡುಪಿ ಜಿಲ್ಲೆಯ ನಿವಾಸಿಗಳು ಹೊರ ಪ್ರಯಾಣಕ್ಕೆ ತೆರಳುವ ಮುನ್ನ ಜಿಲ್ಲಾ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆ 0820-2526709 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಜೊತೆಗೆ ವಾಟ್ಸ್ಆಪ್ ಮೂಲಕ: ಮನೆ ವಿಳಾಸ, ಹೊರಡುವ ಮತ್ತು ಮರಳುವ ದಿನಾಂಕ ಹಾಗೂ ಸಮಯ, ಮನೆಯ ಮುಂದೆ ತೆಗೆದ ಸೆಲ್ಫಿ ಚಿತ್ರ ಇವುಗಳನ್ನು ಕಳುಹಿಸಬೇಕು.

ನಿಯಂತ್ರಣ ಕೊಠಡಿ ಈ ಮಾಹಿತಿಯನ್ನು ಸಂಬಂಧಿತ ಪೊಲೀಸ್ ಠಾಣೆಗೆ ರವಾನಿಸಲಿದೆ. ಬಳಿಕ ಬೀಟ್ ಸಿಬ್ಬಂದಿಗೆ ಮನೆ ಮೇಲ್ವಿಚಾರಣೆಯ ಜವಾಬ್ದಾರಿ ನೀಡಲಾಗುತ್ತದೆ. ಮನೆ ಮಾಲೀಕರು ಮರಳುವವರೆಗೆ ಪೊಲೀಸರು ನಿಗಾ ಮುಂದುವರಿಸಲಿದ್ದಾರೆ. ಆದರೆ ಈ ಸೌಲಭ್ಯವನ್ನು ಪ್ರತ್ಯೇಕ ಮನೆಗಳಿಗೆ ಮಾತ್ರ ಅನ್ವಯಿಸಲಾಗಿದ್ದು, ಅಪಾರ್ಟ್‌ಮೆಂಟ್‌ಗಳು ಅಥವಾ ಬಹುಮಹಡಿ ನಿವಾಸಗಳಿಗೆ ಇದು ಲಭ್ಯವಿರುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಮನೆ ಮತ್ತು ವೈಯಕ್ತಿಕ ಮಾಹಿತಿಯನ್ನು ಅನಧಿಕೃತ ಅಥವಾ ಅಪರಿಚಿತ ದೂರವಾಣಿ ಸಂಖ್ಯೆಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ‘ಲಾಕ್‌ಡ್ ಹೌಸ್ ಬೀಟ್ ಸಿಸ್ಟಮ್’ ಯೋಜನೆ ಸಾರ್ವಜನಿಕರ ಸುರಕ್ಷತೆಗಾಗಿ ಉಡುಪಿ ಪೊಲೀಸರು ಕೈಗೊಂಡಿರುವ ಮಹತ್ವದ ಹೆಜ್ಜೆಯಾಗಿದೆ. ಜನರು ಮತ್ತು ಪೊಲೀಸರ ನಡುವಿನ ಸಹಕಾರ ಹೆಚ್ಚಿದರೆ, ಖಾಲಿ ಮನೆಗಳ ಭದ್ರತೆ ಮತ್ತಷ್ಟು ಬಲವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

What is the new plan of Udupi Police for the security of vacant houses? – ತುಳುಟೈಮ್ಸ್

ಇದನ್ನೂ ಓದಿ :ಮಕ್ಕಳು ಭಾವನೆಗಳನ್ನು ಹಂಚಿಕೊಳ್ಳದಿರುವುದಕ್ಕೆ ಪೋಷಕರ ಈ ಅಭ್ಯಾಸಗಳೇ ಕಾರಣ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=sTigav8WrjnjBaa-

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 167

You cannot copy content of this page