ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸೌರಶಕ್ತಿ ಬಳಸಿ ಅಡುಗೆ : ಇಲ್ಲಿ ತಯಾರಾಗುತ್ತೆ ದಿನಕ್ಕೆ 1000 ಊಟ

ಔರೋವಿಲ್ : Tulu Times l ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಜಾಗತಿಕ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗಿ ಭಾರತದಲ್ಲಿ ಎಲ್‌ಪಿಜಿ ಪೂರೈಕೆ ಕುರಿತು ಆತಂಕ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ನಗರಗಳಲ್ಲಿ ಹೋಟೆಲ್‌ಗಳು ಮತ್ತು ಸಣ್ಣ ಆಹಾರ ಅಂಗಡಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆಯ ಬಗ್ಗೆ ಎಚ್ಚರಿಕೆ ನೀಡುತ್ತಿರುವ ಸಂದರ್ಭದಲ್ಲೇ, ಸೌರಶಕ್ತಿಯನ್ನು ಬಳಸಿ ಅಡುಗೆ ಮಾಡುವ ವಿಶಿಷ್ಟ ಪ್ರಯೋಗ ಗಮನ ಸೆಳೆಯುತ್ತಿದೆ.

ತಮಿಳುನಾಡಿನ ಔರೋವಿಲ್ ಸಮೀಪದಲ್ಲಿರುವ ‘ಸೋಲಾರ್ ಕಿಚನ್’ ಎಂಬ ಸಮುದಾಯ ಅಡುಗೆಮನೆ ಸೌರಶಕ್ತಿಯ ನೆರವಿನಿಂದ ದಿನಕ್ಕೆ ಸುಮಾರು 1,000 ಜನರಿಗೆ ಊಟ ಸಿದ್ಧಪಡಿಸುತ್ತಿದೆ. 1998ರಲ್ಲಿ ಪ್ರಾರಂಭವಾದ ಈ ಸಮುದಾಯ ಕ್ಯಾಂಟೀನ್‌ನಲ್ಲಿ ತಯಾರಾಗುವ ಆಹಾರದ ಬಹುಭಾಗವನ್ನು ಸೌರಶಕ್ತಿಯ ಸಹಾಯದಿಂದ ಅಡುಗೆ ಮಾಡಲಾಗುತ್ತದೆ.

ಸೌರಶಕ್ತಿಯಿಂದ ಅಡುಗೆ ಹೇಗೆ?
ಈ ಅಡುಗೆಮನೆಯ ಮೇಲ್ಚಾವಣಿಯಲ್ಲಿ ಸುಮಾರು 15 ಮೀಟರ್ ನಲ್ಲಿ ಸೌರ ಕಾನ್ಸೆಂಟ್ರೇಟರ್ ಅಳವಡಿಸಲಾಗಿದೆ. ಇದು ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಿ ತಾಪವನ್ನು ಉತ್ಪಾದಿಸುತ್ತದೆ. ಆ ತಾಪದಿಂದ ಬಾಷ್ಪ ಸೃಷ್ಟಿಯಾಗಿ ದೊಡ್ಡ ಪ್ರಮಾಣದ ಆಹಾರವನ್ನು ಬೇಯಿಸಲು ಬಳಸಲಾಗುತ್ತದೆ. ಇದರ ಮೂಲಕ ಎಲ್‌ಪಿಜಿ ಬಳಕೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಲಾಗಿದೆ.

ದಿನಕ್ಕೆ ಸಾವಿರಕ್ಕೂ ಹೆಚ್ಚು ಊಟ ;
ಔರೋವಿಲ್‌ನ ಅಧಿಕೃತ ಮಾಹಿತಿಯ ಪ್ರಕಾರ, ಇಲ್ಲಿ ಪ್ರತಿದಿನ ಸುಮಾರು 1,000 ಮಧ್ಯಾಹ್ನದ ಊಟಗಳನ್ನು ತಯಾರಿಸಲಾಗುತ್ತದೆ. ಸುಮಾರು 540 ಊಟಗಳನ್ನು ಶಾಲೆಗಳಿಗೆ ಕಳುಹಿಸಲಾಗುತ್ತದೆ.‌ 200 ಊಟಗಳನ್ನು ಟಿಫಿನ್ ಮೂಲಕ ನಿವಾಸಿಗಳಿಗೆ ತಲುಪಿಸಲಾಗುತ್ತದೆ. 260ರಿಂದ 300 ಮಂದಿ ಅಡುಗೆಮನೆಯ ಡೈನಿಂಗ್ ಹಾಲ್‌ನಲ್ಲಿ ಊಟ ಮಾಡುತ್ತಾರೆ.

ಸ್ಥಳೀಯ ಬೆಳೆಗಳಿಂದ ಸಸ್ಯಾಹಾರಿ ಮೆನು ;
ಈ ಅಡುಗೆಮನೆಯಲ್ಲಿ ಮುಖ್ಯವಾಗಿ ಸಸ್ಯಾಹಾರಿ ಆಹಾರವನ್ನು ತಯಾರಿಸಲಾಗುತ್ತದೆ. ಪಾಸ್ತಾ, ಮ್ಯಾಶ್ಡ್ ಪೋಟೇಟೋ, ಸಲಾಡ್ ಮೊದಲಾದ ಪಾಶ್ಚಾತ್ಯ ಆಹಾರಗಳ ಜೊತೆಗೆ ಇಡ್ಲಿ, ದೋಸೆ, ದಾಲ್, ಚಟ್ನಿ ಮುಂತಾದ ಭಾರತೀಯ ಪದಾರ್ಥಗಳನ್ನೂ ನೀಡಲಾಗುತ್ತದೆ. ಹೆಚ್ಚಿನ ತರಕಾರಿ ಮತ್ತು ಧಾನ್ಯಗಳನ್ನು ಸ್ಥಳೀಯವಾಗಿ ಸಸ್ಯಸ್ನೇಹಿ ಕೃಷಿಯಿಂದ ಬೆಳೆದವುಗಳೇ ಬಳಸಲಾಗುತ್ತದೆ. ಒಟ್ಟಾರೆ, ಎಲ್‌ಪಿಜಿ ಪೂರೈಕೆ ಕುರಿತ ಅನಿಶ್ಚಿತತೆ ನಡುವೆ ಔರೋವಿಲ್‌ನ ಸೌರ ಅಡುಗೆಮನೆ ಮಾದರಿ, ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು ದೊಡ್ಡ ಪ್ರಮಾಣದ ಅಡುಗೆ ನಡೆಸಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿ ಪರಿಣಮಿಸಿದೆ.

Cooking using solar energy: 1000 meals a day are prepared here – ತುಳು ಟೈಮ್ಸ್

ಇದನ್ನೂ ಓದಿ : ಬೆಂಗಳೂರು ಐಟಿ ಕಂಪೆನಿಗಳಲ್ಲಿ ಉದ್ಯೋಗ ಕಳೆತ: ಒಂದೇ ದಿನ 40% ಸಿಬ್ಬಂದಿ ವಜಾ

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/-PlvbIZDxfU?si=16u4zDqFh1_lBN_I

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page