ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಾರ್ಚ್ 11ರಿಂದ 5 ದಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತ: ವೈದ್ಯರ ಪ್ರತಿಭಟನೆ

ಬೆಂಗಳೂರು: Tulu Times l ರಾಜ್ಯದ ಸರ್ಕಾರಿ ವೈದ್ಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಿಂದ ಐದು ದಿನಗಳ ಕಾಲ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ನಡೆಯುವ ಹೊರರೋಗಿ ವಿಭಾಗದ (OPD) ಸೇವೆಗಳು ಮಾರ್ಚ್ 11ರಿಂದ ಮಾರ್ಚ್ 15ರವರೆಗೆ ಸ್ಥಗಿತಗೊಳ್ಳಲಿವೆ.

ಈ ಪ್ರತಿಭಟನೆಗೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಸೇರಿದಂತೆ ವಿವಿಧ ವೈದ್ಯಕೀಯ ಸಿಬ್ಬಂದಿ ಸಂಘಟನೆಗಳು ಬೆಂಬಲ ನೀಡಿವೆ. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸೇವಾ ಸಂಬಂಧಿತ ಸಮಸ್ಯೆಗಳನ್ನು ಸರ್ಕಾರ ಗಮನಿಸುತ್ತಿಲ್ಲ ಎಂಬ ಆರೋಪದೊಂದಿಗೆ ವೈದ್ಯರು ಈ ಹೋರಾಟಕ್ಕೆ ಮುಂದಾಗಿದ್ದಾರೆ.

OPD ಸೇವೆ ಸ್ಥಗಿತ, ತುರ್ತು ಸೇವೆ ಮುಂದುವರಿಕೆ ;

ವೈದ್ಯರ ಸಂಘದ ಮಾಹಿತಿಯಂತೆ, ಮಾರ್ಚ್ 11ರಿಂದ 15ರವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಆದರೆ ರೋಗಿಗಳ ತುರ್ತು ಚಿಕಿತ್ಸೆ ಮಾತ್ರ ಮುಂದುವರೆಯಲಿದೆ. ಸರ್ಕಾರವು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮಾರ್ಚ್ 16ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹೋಗುವುದಾಗಿ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆ ಹಂತದಲ್ಲಿ ತುರ್ತು ಸೇವೆಗಳನ್ನೂ ಬಹಿಷ್ಕರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಸಂಘದ ಪ್ರಮುಖರಾದ ಡಾ. ರವೀಂದ್ರನಾಥ್ ಎಂ. ಮೇಟಿ ಅವರು ಮಾತನಾಡಿ, ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ನಾವು ಕಾಯುತ್ತಿದ್ದೇವೆ. ಪದೋನ್ನತಿ, ಕ್ಯಾಡರ್ ನಿಯಮಗಳಲ್ಲಿ ತಿದ್ದುಪಡಿ ಹಾಗೂ ಹಿರಿಯ ಹುದ್ದೆಗಳ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ವಿಚಾರದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಹೀಗಾಗಿ ಪ್ರತಿಭಟನೆ ಹೊರತುಪಡಿಸಿ ಬೇರೆ ಮಾರ್ಗ ಇಲ್ಲ, ಎಂದು ಹೇಳಿದ್ದಾರೆ.

ವೈದ್ಯರ ಸಂಘಟನೆಗಳು ಸರ್ಕಾರದ ಮುಂದೆ ಕೆಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿವೆ: ವಿವಿಧ ಹುದ್ದೆಗಳ ಪದೋನ್ನತಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವುದು, ಕ್ಯಾಡರ್ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಸ್ಪಷ್ಟತೆ ತರಬೇಕು,‌ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡುವುದು, ಎಲ್ಲಾ ಕ್ಯಾಡರ್‌ಗಳ ಪಟ್ಟಿಯನ್ನು ಸಮಯಕ್ಕೆ ಪ್ರಕಟಿಸುವುದು,

ವೇತನ ಸಮಸ್ಯೆಗೂ ಪರಿಹಾರ, ರಾಷ್ಟ್ರೀಯ ಆರೋಗ್ಯ ಮಿಷನ್ ಸೇರಿದಂತೆ ವಿವಿಧ ಯೋಜನೆಗಳಡಿ ಕೆಲಸ ಮಾಡುತ್ತಿರುವ ಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ವಿಳಂಬವಾಗುತ್ತಿರುವುದನ್ನೂ ವೈದ್ಯರು ಉಲ್ಲೇಖಿಸಿದ್ದಾರೆ. ಕೆಲವರಿಗೆ ಮೂರು ಅಥವಾ ನಾಲ್ಕು ತಿಂಗಳಿಗೆ ಒಮ್ಮೆ ಮಾತ್ರ ವೇತನ ಸಿಗುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ. ಪ್ರತಿಮಾಸವೂ ಮೊದಲ ವಾರದಲ್ಲೇ ವೇತನ ಪಾವತಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವೈದ್ಯರ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವೂ ಬೆಂಬಲ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಚಿಕಿತ್ಸಾ ಸೇವೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಒಟ್ಟಾರೆ, ಸರ್ಕಾರ ಮತ್ತು ವೈದ್ಯರ ಸಂಘಟನೆಗಳ ನಡುವೆ ಒಪ್ಪಂದವಾಗದಿದ್ದರೆ ಮಾರ್ಚ್ 11ರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯಕೀಯ ಸೇವೆಗಳು ವ್ಯತ್ಯಯಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

OPD services in government hospitals to be suspended for 5 days from March 11: Doctors protest – ತುಳುಟೈಮ್ಸ್

ಇದನ್ನೂ ಓದಿ : ಗ್ಯಾಸ್ ಸಿಗದೆ ಹೋಟೆಲ್ ಗಳಲ್ಲಿ ಸೌದೆ ಬಳಕೆ : 70 ದಿನಗಳಿಗೆ ಆಗುವಷ್ಟು ಮಾತ್ರ ಎಲ್ ಪಿಜಿ !

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/65g4QkcjfLA?si=PogektWqaktaetja

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 149

You cannot copy content of this page