ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಐಟಿ ದಾಳಿ ವೇಳೆ ಬೆಂಗಳೂರಿನ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್

ಬೆಂಗಳೂರು : Tulu Times | ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ. ರಾಯ್ ಅವರು ನಗರದ ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ಅಶೋಕನಗರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ರಾಯ್ ಅವರ ಮೃತದೇಹವನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪುನರಾವರ್ತಿತ ಆದಾಯ ತೆರಿಗೆ ದಾಳಿಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ರಾಯ್ ಅವರು ಈ ತೀವ್ರ ನಿರ್ಧಾರ ಕೈಗೊಂಡಿರಬಹುದೆಂದು ಶಂಕಿಸಲಾಗಿದೆ. ಶುಕ್ರವಾರವೂ ಅವರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಲಭ್ಯ ಮಾಹಿತಿಯಂತೆ, ಶುಕ್ರವಾರ ಬೆಳಿಗ್ಗೆ ಲ್ಯಾಂಗ್‌ಫೋರ್ಡ್ ಟೌನ್‌ನ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ಕಚೇರಿಗೆ ಆಗಮಿಸಿದ ರಾಯ್ ಅವರು ಸುಮಾರು ಒಂದು ಗಂಟೆ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ ಕೆಲವು ದಾಖಲೆಗಳನ್ನು ಒಪ್ಪಿಸಿದ್ದರು. ಬಳಿಕ ಇನ್ನಷ್ಟು ದಾಖಲೆಗಳನ್ನು ತರುವುದಾಗಿ ಹೇಳಿ ಬೇರೆ ಕೊಠಡಿಗೆ ತೆರಳಿದ ಅವರು, ಅಲ್ಲಿ ತಾವೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಅವರು ಸಾವನ್ನಪ್ಪಿದ್ದಾರೆ. ಉಪ ಪೊಲೀಸ್ ಆಯುಕ್ತ ಅಕ್ಷಯ್ ಅವರು ತನಿಖೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದು, ಘಟನೆಯಲ್ಲಿ ಬಳಸಿದ ಶಸ್ತ್ರಾಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಯಾವುದೇ ಮರಣೋತ್ತರ ಪತ್ರ ಅಥವಾ ಮೊಬೈಲ್ ಸಂದೇಶಗಳು ಲಭ್ಯವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಎಲ್ಲ ಆಯಾಮಗಳಿಂದ ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಕೇರಳದವರಾದ ಸಿ.ಜೆ. ರಾಯ್ ಅವರು 1997ರಲ್ಲಿ ಎಚ್‌ಪಿ ಕಂಪನಿಯಲ್ಲಿ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟು ಕಾನ್ಫಿಡೆಂಟ್ ಗ್ರೂಪ್ ಅನ್ನು ಸ್ಥಾಪಿಸಿ, ಅದನ್ನು ಪ್ರಮುಖ ಸಂಸ್ಥೆಯಾಗಿ ಬೆಳೆಸಿದರು. ಆರಂಭದಲ್ಲಿ 30–40 ಸೈಟ್‌ಗಳೊಂದಿಗೆ ವ್ಯವಹಾರ ಆರಂಭಿಸಿದ ಅವರು, ವರ್ಷಗಳ ನಂತರ ಸುಮಾರು 1,000 ಎಕರೆ ಭೂಮಿಯನ್ನು ಸಂಪಾದಿಸಿದ್ದರು ಎಂದು ತಿಳಿದುಬಂದಿದೆ. ಘಟನೆಯ ನಂತರ, ಕಚೇರಿಯಲ್ಲಿ ದಾಳಿ ನಡೆಸುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳವನ್ನು ತೊರೆದಿದ್ದಾರೆ. ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸುಮಾರು 10 ಮಂದಿ ಅಧಿಕಾರಿಗಳು ಎರಡು ವಾಹನಗಳಲ್ಲಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Confident Group Chairman C.J. Roy committed suicide in his Bengaluru office during an IT raid. – ತುಳು ಟೈಮ್ಸ್

ಇದನ್ನೂ ಓದಿ : ಉಜಿರೆ: ನಾಳೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರಿಗೆ ಅಭಿನಂದನಾ ಕಾರ್ಯಕ್ರಮ

======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/yyHI_WJ6OnU?si=T-3ZJ4R-wWFxpMEN

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page