ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಡಿಜಿಟಲ್ ಮಾತ್ರವಲ್ಲ, ಇನ್ಮುಂದೆ ಕೈಗೆ ಸಿಗಲಿದೆ ಅಂಕಪಟ್ಟಿ

ಕರ್ನಾಟಕ : Tulu Times | ಕರ್ನಾಟಕದ ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಇನ್ಮುಂದೆ ಡಿಜಿಟಲ್ ಅಂಕಪಟ್ಟಿಯ ಜೊತೆಗೆ ಪ್ರಿಂಟೆಡ್ ಅಂಕಪಟ್ಟಿಯನ್ನೂ ನೀಡಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳ ನಿರಂತರ ಬೇಡಿಕೆ ಹಾಗೂ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ನಕಲಿ ಅಂಕಪಟ್ಟಿಗಳ ಹಾವಳಿ ತಡೆಯುವುದು ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಈ ಹಿಂದೆ ಪದವಿ ವಿದ್ಯಾರ್ಥಿಗಳಿಗೆ ಕೇವಲ ಡಿಜಿಟಲ್ ಅಂಕಪಟ್ಟಿ ನೀಡಲು ಉನ್ನತ ಶಿಕ್ಷಣ ಇಲಾಖೆ ಯೋಜಿಸಿತ್ತು.

ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಟಲ್ ರೂಪದಲ್ಲಿ ಮಾತ್ರ ಒದಗಿಸುವ ಪ್ರಸ್ತಾವನೆ ಇತ್ತು. ಆದರೆ, ಡಿಜಿಟಲ್ ಅಂಕಪಟ್ಟಿಯನ್ನು ಮಾತ್ರ ಹೊಂದಿರುವುದರಿAದ ವಿದ್ಯಾರ್ಥಿಗಳು ಹಲವು ಪ್ರಾಯೋಗಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ, ಉದ್ಯೋಗ ಸಂದರ್ಶನಗಳಿಗೆ ಹಾಜರಾಗುವಾಗ ಹಾಗೂ ಬ್ಯಾಂಕ್ ಸಾಲ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅರ್ಜಿ ಸಲ್ಲಿಸುವಾಗ ಕೆಲವು ಸಂಸ್ಥೆಗಳು ಮೂಲ ಭೌತಿಕ ಅಂಕಪಟ್ಟಿಯನ್ನೇ ಕೇಳುತ್ತಿದ್ದವು. ಇದರಿಂದ ಡಿಜಿಟಲ್ ಅಂಕಪಟ್ಟಿ ಹೊಂದಿದ್ದರೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿತ್ತು. ಇದಲ್ಲದೆ, ಭೌತಿಕ ಅಂಕಪಟ್ಟಿ ನೀಡದಿದ್ದರೂ ಕೆಲವು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಂದ ಪ್ರತಿ ವರ್ಷ ಮುದ್ರಣ ಶುಲ್ಕ ವಸೂಲಿ ಮಾಡುತ್ತಿದ್ದವು ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಭೌತಿಕ ಅಂಕಪಟ್ಟಿ ಮರುಜಾರಿಗೆ ವಿದ್ಯಾರ್ಥಿಗಳು ಒತ್ತಾಯಿಸಿದ್ದರು.

40 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಜಾರಿ ;

ಈ ವಿಚಾರವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಮುದ್ರಿತ ಅಂಕಪಟ್ಟಿ ನೀಡುವ ವ್ಯವಸ್ಥೆಯನ್ನು ಮುಂದುವರಿಸುವAತೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಡಿಜಿಟಲ್ ಅಂಕಪಟ್ಟಿಗಳಲ್ಲಿಯೂ ಅಂಕಗಳನ್ನು ಬದಲಾಯಿಸುವುದು ಹಾಗೂ ಡಿಜಿಟಲ್ ಸಹಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ಭೌತಿಕ ಅಂಕಪಟ್ಟಿಯ ಅಗತ್ಯವಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ 2026 – 27ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ೪೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಡಿಜಿಟಲ್ ಪ್ರತಿಯ ಜೊತೆಗೆ ಭೌತಿಕ ಅಂಕಪಟ್ಟಿಯನ್ನೂ ನೀಡಲು ಅನುಮೋದನೆ ನೀಡಲಾಗಿದೆ ಎಂದು ವರದಿಯಾಗಿದೆ.

ಭೌತಿಕ ಅಂಕಪಟ್ಟಿ ಮರುಜಾರಿಯಾದರೂ ಡಿಜಿಟಲ್ ದಾಖಲೆಗಳ ವ್ಯವಸ್ಥೆ ಮುಂದುವರಿಯಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳು ಸಂಬAಧಿಸಿದ ಪೋರ್ಟಲ್‌ಗಳಲ್ಲಿ ಲಭ್ಯವಿರಲಿದ್ದು, ಅಗತ್ಯವಿದ್ದಾಗ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಅವುಗಳನ್ನು ಸುಲಭವಾಗಿ ಪಡೆಯಲು ಮತ್ತು ಪರಿಶೀಲಿಸಲು ಸಾಧ್ಯವಾಗಲಿದೆ.

From now on, mark sheets will be available in physical form, not just digitally – ತುಳು ಟೈಮ್ಸ್

ಇದನ್ನೂ ಓದಿ : ಗೌರಿ-ಗಣೇಶ ಹಬ್ಬದಂದು ಮಗನ ಹೆಸರು ರಿವೀಲ್ ಮಾಡಿದ ಡಾಲಿ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :  https://youtube.com/live/ldxlcSIyBx4?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 222

You cannot copy content of this page