ಬೆಂಗಳೂರು: Tulu Times l ಕರ್ನಾಟಕ ಸರ್ಕಾರವು ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು ದತ್ತು ಪಡೆಯಲು ಅವಕಾಶ ನೀಡುವ ಪ್ರಸ್ತಾವಕ್ಕೆ ಶಿಕ್ಷಣ ತಜ್ಞರು, ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ತೆರಿಗೆದಾರರ ಹಣದಿಂದ ನಡೆಯುವ ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ಸರ್ಕಾರವೇ ತನ್ನ ಹೊಣೆಗಾರಿಕೆಯಲ್ಲಿ ಕೈಗೊಳ್ಳಬೇಕು, ಖಾಸಗಿ ಸಂಸ್ಥೆಗಳ ಮೇಲೆ ಅವಲಂಬಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಎಫ್‌ಕೆಸಿಸಿಐ ಆಯೋಜಿಸಿದ್ದ ಗ್ಲೋಬಲ್ CSR ಮತ್ತು ಸಸ್ಟೇನಬಿಲಿಟಿ ಸಮಿಟ್–2026 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಗ್ರಾಮೀಣ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಂಪನಿಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸುವಂತೆ ಮನವಿ ಮಾಡಿದ್ದರು. ಶಾಲೆಗಳನ್ನು ದತ್ತು ಪಡೆದು ಹೊಸ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯಗಳನ್ನು ನಿರ್ಮಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ರೂಪಿಸಲು ಕೈಜೋಡಿಸುವಂತೆ ಕೈಗಾರಿಕೆಗಳಿಗೆ ಅವರು ಕರೆ ನೀಡಿದ್ದರು.
ಶಿಕ್ಷಣದ ಗುಣಮಟ್ಟದ ಅಂತರವನ್ನು ಕಡಿಮೆ ಮಾಡಲು ಈ ಯೋಜನೆ ;
ಕರ್ನಾಟಕದಲ್ಲಿ ಸಂಗ್ರಹವಾಗುವ CSR ನಿಧಿಯ ಬಹುಪಾಲು ರಾಜ್ಯದಲ್ಲಿಯೇ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಬಳಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ನಗರಗಳ ಖಾಸಗಿ ಶಾಲೆಗಳು ಮತ್ತು ಗ್ರಾಮೀಣ ಸರ್ಕಾರಿ ಶಾಲೆಗಳ ನಡುವಿನ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟದ ಅಂತರವನ್ನು ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದರು. ಈಗಾಗಲೇ ಟೊಯೋಟಾ ಸೇರಿದಂತೆ ಕೆಲವು ಕಂಪನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು ನೀಡಿರುವುದನ್ನೂ ಅವರು ಉಲ್ಲೇಖಿಸಿದ್ದರು.

ಆದರೆ, ಈ ಪ್ರಸ್ತಾವಕ್ಕೆ ಶಿಕ್ಷಣ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಗಳು ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುತ್ತಿದ್ದು, ಅವುಗಳ ಅಭಿವೃದ್ಧಿಯ ಸಂಪೂರ್ಣ ಹೊಣೆಗಾರಿಕೆ ಸರ್ಕಾರದ್ದೇ ಆಗಿರಬೇಕು ಎಂದು ಅವರು ಹೇಳಿದ್ದಾರೆ. ಖಾಸಗಿ ಸಂಸ್ಥೆಗಳ ನೆರವಿನ ಬದಲು ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಮೀಸಲಿಟ್ಟು ಶಾಲೆಗಳ ಮೂಲಸೌಕರ್ಯ, ತರಗತಿ ಕೊಠಡಿಗಳು, ಕುಡಿಯುವ ನೀರು, ಶೌಚಾಲಯ, ಪ್ರಯೋಗಾಲಯ, ಗ್ರಂಥಾಲಯ ಹಾಗೂ ಕಲಿಕಾ ಸೌಲಭ್ಯಗಳನ್ನು ಸರ್ಕಾರವೇ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವೇ ಹೆಚ್ಚಿನ ಹೂಡಿಕೆ ಮಾಡಬೇಕು ;
ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಅರ್ಹ ಮತ್ತು ಅನುಭವಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಅಗತ್ಯವೇನು ಎಂಬ ಪ್ರಶ್ನೆಯನ್ನೂ ಶಿಕ್ಷಣ ತಜ್ಞರು ಎತ್ತಿದ್ದಾರೆ. ಸರ್ಕಾರ ಸೂಕ್ತ ಹಣಕಾಸು ಮತ್ತು ಆಡಳಿತಾತ್ಮಕ ಬೆಂಬಲ ನೀಡಿದರೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳೂ ಇದೇ ಆತಂಕವನ್ನು ವ್ಯಕ್ತಪಡಿಸಿದ್ದು, ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ಕ್ರಮ ಮುಂದಿನ ದಿನಗಳಲ್ಲಿ ಸರ್ಕಾರಿ ಶಿಕ್ಷಣದ ಖಾಸಗೀಕರಣಕ್ಕೆ ದಾರಿ ಮಾಡಿಕೊಡಬಹುದು ಎಂದು ಎಚ್ಚರಿಸಿವೆ. ಈ ಪ್ರಸ್ತಾವವನ್ನು ತಕ್ಷಣವೇ ಹಿಂಪಡೆದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವೇ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸರ್ಕಾರ ಈ ಯೋಜನೆಯನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ಶಿಕ್ಷಣ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
Opposition to the entry of private organizations into government schools; warning of a protest. – ತುಳು ಟೈಮ್ಸ್
ಇದನ್ನೂ ಓದಿ : ಸರಿಯಾದ ಸಮಯದ ಮಹತ್ವ ಗೊತ್ತೇ? ಯಶಸ್ಸಿನ ಗುಟ್ಟು ಹೇಳುವ ಜೀವನ ಪಾಠಗಳು
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w











