ಬೆಂಗಳೂರು : Tulu Times l ಬೆಂಗಳೂರಿನ ಡೇ-ಕೇರ್ ಕೇಂದ್ರದಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, ರಾಜ್ಯದ ಎಲ್ಲಾ ಡೇ-ಕೇರ್ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ, ಸುರಕ್ಷತಾ ಮಾರ್ಗಸೂಚಿಗಳ ಕಡ್ಡಾಯ ಅನುಷ್ಠಾನ ಹಾಗೂ ಮಕ್ಕಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಆಯೋಗದ ಮಾಜಿ ಅಧ್ಯಕ್ಷ ಶಶಿಧರ್ ಅವರು ಬರೆದಿರುವ ಪತ್ರದಲ್ಲಿ, ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಬೆಂಗಳೂರಿನ ಎಚ್ಎಎಲ್ ಆವರಣದಲ್ಲಿರುವ ಕ್ಯಾಪ್ಜೆಮಿನಿ ಟೆಕ್ನಾಲಜಿ ಸರ್ವೀಸಸ್ ಇಂಡಿಯಾ ಕ್ಯಾಂಪಸ್ನಲ್ಲಿರುವ ಡೇ-ಕೇರ್ ಕೇಂದ್ರದಲ್ಲಿ ಮಕ್ಕಳ ಮೇಲೆ ಅಮಾನವೀಯ ವರ್ತನೆ ನಡೆಸಿರುವುದಾಗಿ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋಗಳು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿವೆ. ವೀಡಿಯೋಗಳಲ್ಲಿ ಪುಟ್ಟ ಮಕ್ಕಳನ್ನು ವಾಷಿಂಗ್ ಮೆಷಿನ್ ಒಳಗೆ ಕೂರಿಸುವುದು, ಟಾಯ್ಲೆಟ್ ಜೆಟ್ ಸ್ಪ್ರೇ ಮೂಲಕ ಬಾಯಿಗೆ ನೀರು ಸಿಂಪಡಿಸುವುದು ಹಾಗೂ ಬಾತ್ರೂಮ್ನಲ್ಲಿ ಕೂಡಿ ಹಾಕಿರುವ ದೃಶ್ಯಗಳಿರುವುದಾಗಿ ಆರೋಪಿಸಲಾಗಿದೆ.
ರಾಜ್ಯದಾದ್ಯಂತ ಡೇ-ಕೇರ್ ಕೇಂದ್ರಗಳ ಮೇಲೆ ನಿಯಮಿತ ತಪಾಸಣೆ ;
ಇತ್ತೀಚಿನ ದಿನಗಳಲ್ಲಿ ಉದ್ಯೋಗದಲ್ಲಿರುವ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಡೇ-ಕೇರ್ ಕೇಂದ್ರಗಳನ್ನು ಅವಲಂಬಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ, ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆ ಕೇಂದ್ರಗಳ ಆಡಳಿತ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಆಯೋಗ ತಿಳಿಸಿದೆ. ರಾಜ್ಯ ಸರ್ಕಾರ ಈಗಾಗಲೇ ಡೇ-ಕೇರ್ ಕೇಂದ್ರಗಳ ನಿರ್ವಹಣೆಗೆ ಸಂಬಂಧಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದರೂ, ಈ ಪ್ರಕರಣದಲ್ಲಿ ಅವುಗಳನ್ನು ಸಮರ್ಪಕವಾಗಿ ಪಾಲಿಸಲಾಗಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ರಾಜ್ಯದಾದ್ಯಂತ ಡೇ-ಕೇರ್ ಕೇಂದ್ರಗಳ ಮೇಲೆ ನಿಯಮಿತ ತಪಾಸಣೆ ನಡೆಸಿ, ನಿಯಮ ಪಾಲನೆ ಖಚಿತಪಡಿಸಬೇಕು ಹಾಗೂ ಬೆಂಗಳೂರಿನಲ್ಲಿ ವಿಶೇಷ ಮೇಲ್ವಿಚಾರಣಾ ತಂಡ ರಚಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಮಾರ್ಗಸೂಚಿಗಳ ಪ್ರಕಾರ ಪ್ರತಿಯೊಂದು ಡೇ-ಕೇರ್ ಕೇಂದ್ರಕ್ಕೂ ಕಡ್ಡಾಯ ನೋಂದಣಿ ಮತ್ತು ಪರವಾನಗಿ ಇರಬೇಕು. ಸಿಬ್ಬಂದಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಕುರಿತು ತರಬೇತಿ ನೀಡಬೇಕು. ದೂರು ನಿವಾರಣಾ ವ್ಯವಸ್ಥೆ, ಸಿಬ್ಬಂದಿಯ ಪೊಲೀಸ್ ಹಿನ್ನೆಲೆ ಪರಿಶೀಲನೆ ಹಾಗೂ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಸಿಬ್ಬಂದಿ ನೇಮಕ ಮಾಡುವುದು ಕಡ್ಡಾಯವಾಗಿದೆ. ಮಕ್ಕಳ ಮೇಲೆ ದೈಹಿಕ ಶಿಕ್ಷೆ, ಮಾನಸಿಕ ಕಿರುಕುಳ ಅಥವಾ ನಿರ್ಲಕ್ಷ್ಯ ತೋರುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಯೋಗ ಒತ್ತಿ ಹೇಳಿದೆ.
ಈ ನಡುವೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಬ್ರೂಕ್ಫೀಲ್ಡ್ನಲ್ಲಿರುವ ಬೇಬಿ ಕೇರ್ ಕೇಂದ್ರದಲ್ಲಿ ನಡೆದಿರುವ ಎನ್ನಲಾದ ಘಟನೆ ಸಂಬಂಧ ಐವರು ಮಹಿಳಾ ಆರೈಕೆ ಸಿಬ್ಬಂದಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 75ರಡಿ ಎಫ್ಐಆರ್ ದಾಖಲಾಗಿದೆ. ಎಚ್ಎಎಲ್ ಪೊಲೀಸರು ಡೇ-ಕೇರ್ ಕೇಂದ್ರವನ್ನು ಪರಿಶೀಲಿಸಿದ್ದು, ದೂರುದಾರರು, ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ಕಂಪನಿಯ ಆಡಳಿತ ವಿಭಾಗಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ವೀಡಿಯೋಗಳು, ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Commission recommends inspection of day-care centers across the state for children’s safety. – ತುಳು ಟೈಮ್ಸ್
ಇದನ್ನೂ ಓದಿ : ಮಕ್ಕಳು ಸುರಕ್ಷಿತವಾಗಿ ಮನೆ ತಲುಪುವವರೆಗೂ ಶಾಲೆಯ ಹೊಣೆ: ಹೈಕೋರ್ಟ್
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/PvZf7aycLaE?feature=share











