ಪುತ್ತೂರು : Tulu Times l ಪುತ್ತೂರಿನ ಕಲಾವಿದ ರಾಮಪ್ರಸಾದ್ ಕೆ. ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರೀಯ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು 50,000 ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ಪಡೆದಿದ್ದಾರೆ. ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) – VBGRAM-G’ ಕಾಯ್ದೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ಸ್ಪರ್ಧೆಯನ್ನು ಆಯೋಜಿಸಿತ್ತು.

ನವದೆಹಲಿಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಮ್ಮೇಳನ–2026ರಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಮಪ್ರಸಾದ್ ಅವರಿಗೆ ಪ್ರಶಸ್ತಿ ಹಾಗೂ ₹50,000 ನಗದು ಬಹುಮಾನವನ್ನು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ, ವಿವಿಧ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
VBGRAM-G ಕಾಯ್ದೆ–2025ರ ಉದ್ದೇಶಗಳು ಮತ್ತು ಅದರ ಪ್ರಮುಖ ಅಂಶಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಸಚಿವಾಲಯವು ನನ್ನ ಭಾರತ ಮತ್ತು ನನ್ನ ಸರ್ಕಾರ ಸಹಯೋಗದಲ್ಲಿ ’60 Seconds for My Village’ ರೀಲ್/ವಿಡಿಯೊ ಸ್ಪರ್ಧೆ, Viksit Bharat–VBGRAM-G Quiz 2026 ಹಾಗೂ ಡಿಜಿಟಲ್ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಲೋಗೋ ಸ್ಪರ್ಧೆಯಲ್ಲಿ ರಾಮಪ್ರಸಾದ್ ಅವರ ವಿನ್ಯಾಸ ಅತ್ಯುತ್ತಮವಾಗಿ ಆಯ್ಕೆಯಾಯಿತು.
ದೇಶದ ವಿವಿಧ ಭಾಗಗಳಿಂದ 7,233 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ರಾಮಪ್ರಸಾದ್ ಅವರ ಸಾಧನೆ ಗಮನಾರ್ಹವಾಗಿದೆ. ದೃಶ್ಯಕಲೆ ಪದವೀಧರರಾಗಿರುವ ರಾಮಪ್ರಸಾದ್ ಅವರಿಗೆ ಸ್ಪರ್ಧೆಯ ಮಾಹಿತಿ ಕೊನೆಯ ದಿನಗಳಲ್ಲಷ್ಟೇ ಲಭ್ಯವಾಗಿತ್ತು. ಅವರು ವಿನ್ಯಾಸ ರೂಪಿಸಲು ಆರಂಭಿಸುವಷ್ಟರಲ್ಲಿ ಮೂಲ ಗಡುವು ಮುಗಿದಿತ್ತು. ಆದರೆ ನಾಲ್ಕು ದಿನಗಳ ಕಾಲಾವಕಾಶ ವಿಸ್ತರಿಸಿದ್ದರಿಂದ ತಮ್ಮ ಲೋಗೋವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮರು ವಿನ್ಯಾಸಗೊಳಿಸಿ ಸಲ್ಲಿಸಿದರು. ಉದ್ಯೋಗ, ಸಬಲೀಕರಣ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆಯನ್ನು ಪ್ರತಿಬಿಂಬಿಸುವ ಅವರ ವಿನ್ಯಾಸವೇ ಅಂತಿಮವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಈ ಪ್ರತಿಷ್ಠಿತ ಗೌರವಕ್ಕೆ ಭಾಜನವಾಯಿತು.
National level honour for Puttur artist; Rs. 50 thousand cash award – ತುಳುಟೈಮ್ಸ್
ಇದನ್ನೂ ಓದಿ :ಭಾರತದ ಸಾಂಸ್ಕೃತಿಕ ಪರಂಪರೆಯ ಜಾಗತಿಕ ಪ್ರಚಾರಕ್ಕೆ ಗೂಗಲ್ ಬೆಂಬಲ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/MbYWc25CAMY?feature=share











