ತುಮಕೂರು : Tulu Times l ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಜೋಗಿಹಳ್ಳಿ ಸಮೀಪ ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಈ ಸ್ಫೋಟವು ಅಪಘಾತವಲ್ಲ, ಬದಲಾಗಿ ದೇಶೀ ಕಚ್ಚಾ ಬಾಂಬ್ ಸ್ಫೋಟಿಸಿ 30 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಯುವಕನ ಪ್ರೇಯಸಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತನನ್ನು ಉತ್ತರ ಕನ್ನಡ ಮೂಲದ ನಾಗೇಂದ್ರ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮಹಿಳೆ ರಮ್ಯಾ, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೋಲಿಸ್ ಮಾಹಿತಿ ಪ್ರಕಾರ, ನಾಗೇಂದ್ರ ಮತ್ತು ರಮ್ಯಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಭಿನ್ನಾಭಿಪ್ರಾಯ ಉಂಟಾಗುತ್ತಿತ್ತು.
ಘಟನೆ ನಡೆದ ದಿನ ನಾಗೇಂದ್ರ, ರಮ್ಯಾಳನ್ನು ಆಸ್ಪತ್ರೆಯಿಂದ ಕರೆದುಕೊಂಡು ಬಂದಿದ್ದಾನೆ. ಆಕೆಯನ್ನು ಬಲವಂತವಾಗಿ ಬಾಡಿಗೆ ಕಾರಿನಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಮ್ಯಾಳ ಸ್ನೇಹಿತೆಯೊಬ್ಬರು ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಕಾರಿನೊಳಗೆ ವಾಗ್ವಾದ, ಬಳಿಕ ಹಲ್ಲೆ ತುಮಕೂರಿನತ್ತ ತೆರಳುತ್ತಿದ್ದ ವೇಳೆ ಕಾರಿನೊಳಗೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ನಾಗೇಂದ್ರ, ರಮ್ಯಾಳ ತಲೆಗೆ ಆಯುಧದಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ರಮ್ಯಾ ಕಾರಿನಿಂದ ಹೊರಬಂದಿದ್ದಾರೆ. ಅಪಾಯವನ್ನು ಅರಿತ ಕಾರು ಚಾಲಕ ಕೂಡ ತಕ್ಷಣ ವಾಹನದಿಂದ ಇಳಿದಿದ್ದಾನೆ. ‘ಕಾರಿನಲ್ಲಿ ಬಾಂಬ್ ಇದೆ’ ಎಂದು ಕೂಗಿದ ರಮ್ಯಾ ಕಾರು ಚಾಲಕರ ಹೇಳಿಕೆ ಪ್ರಕಾರ, ಅವರು ಬೆಂಗಳೂರಿನ ಜಯನಗರದ ಬೈರಸಂದ್ರ ಬೋವಿ ಕಾಲೋನಿಯಿಂದ ನಾಗೇಂದ್ರ ಮತ್ತು ರಮ್ಯಾಳನ್ನು ಕರೆದುಕೊಂಡು ಹೊರಟಿದ್ದರು. ಪ್ರಯಾಣದ ವೇಳೆ ಪೊಲೀಸ್ ಅಧಿಕಾರಿಯಿಂದ ಕರೆ ಬಂದಿದ್ದು, ಚಾಲಕ ಮೊಬೈಲ್ ಅನ್ನು ನಾಗೇಂದ್ರನಿಗೆ ನೀಡಿದ್ದಾನೆ.

ಕೆಲವೇ ಕ್ಷಣಗಳಲ್ಲಿ ನಾಗೇಂದ್ರ ಚಾಕುವಿನಿಂದ ರಮ್ಯಾಳ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ರಮ್ಯಾ ಕಾರಿನಲ್ಲಿ ಬಾಂಬ್ ಇದೆ ಎಂದು ಕೂಗಿದ್ದಾರೆ. ತಕ್ಷಣ ಚಾಲಕ ವಾಹನ ನಿಲ್ಲಿಸಿ, ಸಮೀಪದಲ್ಲಿದ್ದ ಆಟೋ ಮತ್ತು ಬೈಕ್ ಸವಾರರ ಸಹಾಯದಿಂದ ರಮ್ಯಾಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಇಬ್ಬರೂ ಕಾರಿನಿಂದ ದೂರ ಸರಿದ ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ದೇಶೀ ಬಾಂಬ್ ಸ್ಫೋಟಿಸಿ ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾತನಾಡಿ, ಕಾರಿನಲ್ಲಿ ಇದ್ದ ದೇಶೀ ಬಾಂಬ್ ಸ್ಫೋಟದಿಂದಲೇ ಈ ಘಟನೆ ಸಂಭವಿಸಿದೆ ಎಂದು ದೃಢಪಡಿಸಿದ್ದಾರೆ. ರಮ್ಯಾಳ ಆರೋಗ್ಯದಲ್ಲಿ ಸುಧಾರಣೆ ಕಂಡ ಬಳಿಕ ಅವರ ವಿವರವಾದ ಹೇಳಿಕೆಯನ್ನು ದಾಖಲಿಸಲಾಗುವುದು. ಘಟನೆಯ ಸಂಪೂರ್ಣ ಹಿನ್ನೆಲೆ, ಬಾಂಬ್ ಎಲ್ಲಿಂದ ಬಂದಿತು ಹಾಗೂ ಇತರೆ ಎಲ್ಲಾ ಅಂಶಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Tumakuru car blast: Shocking truth revealed in police investigation – ತುಳುಟೈಮ್ಸ್
ಇದನ್ನೂ ಓದಿ :ಬ್ರೇಕಪ್ ಮಾಡಿಸಿದರೆ ತಿಂಗಳಿಗೆ ₹2.8 ಲಕ್ಷ ಸಂಬಳ : ವೈರಲ್ ಆಗಿದೆ ಈ ವಿಚಿತ್ರ ಜಾಬ್
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/F0Pi6t1Eo3E?feature=share











