ಶಿಶಿಲ: Tulu Times l ದೇವಾಲಯಗಳ ತೀರ್ಥಕ್ಷೇತ್ರಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಅವು ಪ್ರಕೃತಿ, ಜೀವ ವೈವಿಧ್ಯ ಮತ್ತು ಸಂಸ್ಕೃತಿಯ ಪ್ರತೀಕಗಳಾಗಿವೆ. ಇಂತಹ ಪವಿತ್ರ ಸ್ಥಳಗಳಲ್ಲಿ ವಾಸಿಸುವ ಮೀನುಗಳನ್ನು ಭಕ್ತರು ದೇವರ ಜೀವಿಗಳೆಂದು ಗೌರವಿಸುತ್ತಾರೆ. ಆದರೆ ಇದೀಗ ಮತ್ರ್ಯತೀರ್ಥ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಶಿಶಿಲೇಶ್ವರ ದೇವಸ್ಥಾನದ ಸಮೀಪದ ಬರ್ಗುಳ ಕಿಂಡಿ ಅಣೆಕಟ್ಟು ಬಳಿ ಕಿಡಿಗೇಡಿಗಳು ಮೈಲುತುತ್ತು ಬಳಸಿ ಮೀನು ಹಿಡಿಯಲು ಯತ್ನಿಸಿದ ಪರಿಣಾಮ ಸಾವಿರಾರು ಮೀನುಗಳು ಸತ್ತಿರುವ ಘಟನೆ ಬೆಳಕಿಗೆ ಬಂದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ಸ್ಯತೀರ್ಥದ ಮೀನುಗಳು ಹಲವು ವರ್ಷಗಳಿಂದ ಆ ಸ್ಥಳದ ವಿಶೇಷ ಆಕರ್ಷಣೆಯಾಗಿದ್ದವು. ಭಕ್ತರು ತೀರ್ಥಕ್ಕೆ ಭೇಟಿ ನೀಡಿದಾಗ ಮೀನುಗಳಿಗೆ ಆಹಾರ ಹಾಕುವುದು ಒಂದು ಸಂಪ್ರದಾಯವಾಗಿತ್ತು. ಈ ಮೀನುಗಳು ಪರಿಸರ ಸಮತೋಲನ ಕಾಪಾಡುವುದರ ಜೊತೆಗೆ ತೀರ್ಥದ ನೀರಿನ ಆರೋಗ್ಯಕ್ಕೂ ನೆರವಾಗುತ್ತವೆ. ಆದರೆ ಕೆಲ ದುಷ್ಕರ್ಮಿಗಳು ಅಥವಾ ದುರುದ್ದೇಶ ಹೊಂದಿದ ವ್ಯಕ್ತಿಗಳು ನೀರಿಗೆ ಸಲ್ಫೇಟ್ ಅಥವಾ ಇತರ ರಾಸಾಯನಿಕ ಪದಾರ್ಥಗಳನ್ನು ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ನೂರಾರು ಮೀನುಗಳು ಸಾವನ್ನಪ್ಪಿದ್ದು, ತೀರ್ಥದ ಪರಿಸರ ವ್ಯವಸ್ಥೆಗೆ ಗಂಭೀರ ಹಾನಿಯಾಗಿದೆ. ನೀರಿನಲ್ಲಿ ವಿಷಕಾರಿ ಅಂಶಗಳು ಬೆರೆತಾಗ ಮೀನುಗಳ ಉಸಿರಾಟ ವ್ಯವಸ್ಥೆ ಹಾನಿಗೊಳಗಾಗಿ ಅವು ಸಾವಿಗೀಡಾಗುತ್ತವೆ.
ಮೇ 29ರ ರಾತ್ರಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ನದಿ ತೀರದಲ್ಲಿ ಸಂಚರಿಸುವ ವೇಳೆ ಸತ್ತು ಬಿದ್ದ ಹಾಗೂ ತೇಲುತ್ತಿದ್ದ ಮೀನುಗಳನ್ನು ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪ್ರಮುಖರಾದ ಕರುಣಾಕರ ಶಿಶಿಲ, ಮನೋಜ್, ಉಮೇಶ್, ಲೋಕೇಶ್ ಅಡ್ಡಹಳ್ಳ ಹಾಗೂ ಪುರುಷೋತ್ತಮ್ ಅಡ್ಡಹಳ್ಳ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ. ಶಿಶಿಲೇಶ್ವರ ದೇವಸ್ಥಾನದ ಸುತ್ತಮುತ್ತ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಅವಕಾಶವಿಲ್ಲ. ಈ ಹಿಂದೆ ಇದೇ ಪ್ರದೇಶದಲ್ಲಿ ನಡೆದಿದ್ದ ಮೀನುಗಳ ಮಾರಣಹೋಮದ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗ ಮತ್ತೊಮ್ಮೆ ಇಂತಹ ದುರ್ಘಟನೆ ಸಂಭವಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ಸ್ಯತೀರ್ಥದಂತಹ ಪವಿತ್ರ ಮತ್ತು ಪರಿಸರದ ದೃಷ್ಟಿಯಿಂದ ಮಹತ್ವದ ಸ್ಥಳಗಳನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಜೀವ ವೈವಿಧ್ಯ ಸಂರಕ್ಷಣೆ ಮತ್ತು ಧಾರ್ಮಿಕ ಪರಂಪರೆಯ ಗೌರವ ಎರಡನ್ನೂ ಕಾಪಾಡುವ ಮೂಲಕವೇ ಇಂತಹ ಅಮೂಲ್ಯ ತಾಣಗಳನ್ನು ಮುಂದಿನ ಪೀಳಿಗೆಗೆ ಉಳಿಸಬಹುದು.
Sinners who fed poison to the fish of Lord Shishila – ತುಳು ಟೈಮ್ಸ್
ಇದನ್ನೂ ಓದಿ : ಬೆಂಗಳೂರು : ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/ox4FkJQkuF4?si=qbYjkTVBQjm8Okgl











