ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪುಲ್ವಾಮಾ ದಾಳಿಯ ಪ್ರಮುಖ ಸಂಚುಕೋರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹತ್ಯೆ

ಪುಲ್ವಾಮಾ : Tulu Times l ಹಮ್ಜಾ ಬುರ್ಹಾನ್ ಅಲಿಯಾಸ್ ‘ಡಾಕ್ಟರ್’ ಎಂದು ಪರಿಚಿತನಾಗಿದ್ದ ಪುಲ್ವಾಮಾ ಉಗ್ರ ದಾಳಿಯ ಪ್ರಮುಖ ಆರೋಪಿಯೊಬ್ಬನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ. ಮೂಲ ಹೆಸರು ಅರ್ಜುಮಂದ್ ಗುಲ್ಜಾರ್ ದಾರ್ ಆಗಿರುವ ಹಮ್ಜಾ ಬುರ್ಹಾನ್, ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ನಿವಾಸಿಯಾಗಿದ್ದ. 2022ರಲ್ಲಿ ಗೃಹ ಸಚಿವಾಲಯ ಅವನನ್ನು ಉಗ್ರನಾಗಿ ಘೋಷಿಸಿತ್ತು.

ಲಭ್ಯ ಮಾಹಿತಿಯ ಪ್ರಕಾರ, 2017ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ತೆರಳುತ್ತಿದ್ದೇನೆ ಎಂದು ಹೇಳಿ ಕಾಶ್ಮೀರ ತೊರೆದಿದ್ದ ಬುರ್ಹಾನ್, ಬಳಿಕ ನಿಷೇಧಿತ ಉಗ್ರ ಸಂಘಟನೆ Al-Badr ಸೇರಿ ಅದರ ಕಮಾಂಡರ್ ಆಗಿ ಹೊರಹೊಮ್ಮಿದ್ದ. 2019ರ ಫೆಬ್ರವರಿ 14ರಂದು ನಡೆದ ಭೀಕರ ಪುಲ್ವಾಮ ದಾಳಿಯ ತನಿಖೆಯಲ್ಲಿ ಬುರ್ಹಾನ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಆ ದಾಳಿಯಲ್ಲಿ ಜೈಷ್ ಇ‌ ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರನು ಸ್ಫೋಟಕ ತುಂಬಿದ ವಾಹನವನ್ನು ಸಿಆರ್‌ಪಿಎಫ್ ವಾಹನ ದಳದ ಮೇಲೆ ಡಿಕ್ಕಿ ಹೊಡೆಸಿದ್ದರಿಂದ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು.ಈ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡಿದ್ದು, ಕೆಲವೇ ದಿನಗಳಲ್ಲಿ ಭಾರತೀಯ ವಾಯುಪಡೆ ಬಾಲಾಕೋಟ್‌ನ ಉಗ್ರ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು.

ಭಾರತೀಯ ಭದ್ರತಾ ಸಂಸ್ಥೆಗಳ ಪ್ರಕಾರ, ಪುಲ್ವಾಮಾ ದಾಳಿಗೆ ಬಳಸಲಾದ ಸ್ಫೋಟಕಗಳು ಹಾಗೂ ಗ್ರೆನೇಡ್‌ಗಳನ್ನು ಉಗ್ರರಿಗೆ ಪೂರೈಸುವಲ್ಲಿ ಬುರ್ಹಾನ್ ಪಾತ್ರವಿತ್ತು. 2020ರ ನವೆಂಬರ್ 18ರಂದು ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ಗ್ರೆನೇಡ್ ದಾಳಿಗೂ ಅವನು ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣಗಳ ಬಳಿಕ ಭಾರತೀಯ ತನಿಖಾ ಸಂಸ್ಥೆಗಳು ಅವನಿಗಾಗಿ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ಆರಂಭಿಸಿದ್ದರೂ, ಬುರ್ಹಾನ್ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪರಾರಿಯಾಗಿದ್ದನೆಂದು ತಿಳಿದುಬಂದಿತ್ತು.

ಇದೀಗ ಮುಜಫರಾಬಾದ್ ನಲ್ಲಿ ಅಪರಿಚಿತ ದುಷ್ಕರ್ಮಿಗಳು ಅವನ ಮೇಲೆ ಗುಂಡಿನ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ಬುರ್ಹಾನ್ ಬಳಿಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದ ಹಲವು ಘೋಷಿತ ಉಗ್ರರು ಇದೇ ರೀತಿಯ ದಾಳಿಗಳಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಹಮ್ಜಾ ಬುರ್ಹಾನ್ ಹತ್ಯೆಯ ಹೊಣೆಗಾರಿಕೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

Pulwama attack mastermind killed in Pakistan-occupied Kashmir – ತುಳುಟೈಮ್ಸ್

ಇದನ್ನೂ ಓದಿ :ಸೋಶಿಯಲ್ ಮೀಡಿಯಾ ಯುಗದಲ್ಲಿ ಮಕ್ಕಳ ಏಕಾಗ್ರತೆಯದ್ದೇ ಚಿಂತೆ ; ಗಮನ ಕಳೆದುಕೊಳ್ಳುತ್ತಿರುವ ಹೊಸ ತಲೆಮಾರು

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/NJ2dNbWbJ3k?si=wgEW97klGgo5Xd_q

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 175

You cannot copy content of this page