ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದೇಣಿಗೆ ಹಣ ಎಣಿಸುತ್ತಲೇ ಕಳ್ಳತನ : ರಾಮ ಮಂದಿರ ಹಗರಣದ ಒಳಕಥೆ ಬಯಲು

ಅಯೋಧ್ಯೆ : Tulu Times l ಅಯೋಧ್ಯೆಯ ರಾಮ ಮಂದಿರದ ಹುಂಡಿಯಲ್ಲಿದ್ದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಕಳ್ಳತನ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಆರೋಪಿಗಳು ಹಣವನ್ನು ಹೇಗೆ ಕದ್ದರು ಎಂಬ ಬೆಚ್ಚಿಬೀಳಿಸುವ ಮಾಹಿತಿ ವಿಶೇಷ ತನಿಖಾ ತಂಡದ ಮಧ್ಯಂತರ ವರದಿಯಲ್ಲಿ ಬಹಿರಂಗವಾಗಿದೆ. ವರದಿಯ ಪ್ರಕಾರ, ದೇಣಿಗೆ ಹಣ ಎಣಿಸುವ ಸಿಬ್ಬಂದಿಯೊಬ್ಬ ಸಿಸಿಟಿವಿ ಕ್ಯಾಮೆರಾವನ್ನು ಉದ್ದೇಶಪೂರ್ವಕವಾಗಿ ಮುಚ್ಚುತ್ತಿದ್ದರೆ, ಮತ್ತೊಬ್ಬ ಸಿಬ್ಬಂದಿ ನಗದು ಕಟ್ಟುಗಳಿಂದ ಹಣವನ್ನು ತೆಗೆದು ತನ್ನ ಬಟ್ಟೆಯೊಳಗೆ ಅಡಗಿಸಿಕೊಳ್ಳುತ್ತಿದ್ದ. ಬಳಿಕ ಆ ಹಣವನ್ನು ದೇವಾಲಯದ ಶೌಚಾಲಯದಲ್ಲಿ ಅಡಗಿಸಿ, ಸೂಕ್ತ ಸಮಯದಲ್ಲಿ ಹೊರಗೆ ಸಾಗಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ದೇವಾಲಯದ ಟ್ರಸ್ಟ್‌ಗೆ ಬ್ಯಾಂಕ್‌ಗೆ ಜಮೆಯಾಗುತ್ತಿದ್ದ ಹಣದ ಪ್ರಮಾಣದಲ್ಲಿ ಅನುಮಾನ ಮೂಡಿತ್ತು. ಸಾಮಾನ್ಯವಾಗಿ ಒಂದು ಹುಂಡಿಯಲ್ಲಿ 6ರಿಂದ 7 ಲಕ್ಷದವರೆಗೆ ಹಣ ಇರುತ್ತಿತ್ತು. ಆದರೆ 500 ಮುಖಬೆಲೆಯ ನೋಟುಗಳ ಕಟ್ಟುಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಒಂದು ವಾರದ ಗುಪ್ತ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ, ಸಿಬ್ಬಂದಿಯೇ ಕಳ್ಳತನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳು ನೋಟುಗಳ ಕಟ್ಟಿಗೆ ಹೆಚ್ಚುವರಿ ನೋಟುಗಳನ್ನು ಸೇರಿಸುತ್ತಿದ್ದರು. ಎಣಿಕೆ ವೇಳೆ ಕಟ್ಟಿಗಳ ಸಂಖ್ಯೆಯನ್ನು ಮಾತ್ರ ಪರಿಶೀಲಿಸಿ ವೌಚರ್ ಸಿದ್ಧಪಡಿಸಲಾಗುತ್ತಿತ್ತು. ನಂತರ ಬ್ಯಾಂಕ್‌ಗೆ ಸಾಗಿಸುವ ಮುನ್ನ ಹೆಚ್ಚುವರಿ ನೋಟುಗಳನ್ನು ತೆಗೆದು ಹಣವನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಹೀಗಾಗಿ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸ ಕಾಣಿಸದೇ ಹಣ ದುರುಪಯೋಗವಾಗುತ್ತಿತ್ತು.

ಶೌಚಾಲಯದಲ್ಲಿ ಹಣ ಅಡಗಿಸಿ ಹೊರಕ್ಕೆ ಸಾಗಣೆ ;
ಕಳ್ಳತನ ಮಾಡಿದ ಹಣವನ್ನು ಮೊದಲು ದೇವಾಲಯದ ಶೌಚಾಲಯದಲ್ಲಿ ಅಡಗಿಸಲಾಗುತ್ತಿತ್ತು. ನಂತರ ಅನುಕೂಲಕರ ಸಮಯದಲ್ಲಿ ದೇವಾಲಯದ ಆವರಣದಿಂದ ಹೊರಗೆ ಸಾಗಿಸಿ, ಬೇರೆ ಸ್ಥಳದಲ್ಲಿ ಆರೋಪಿಗಳ ನಡುವೆ ಹಂಚಿಕೊಳ್ಳಲಾಗುತ್ತಿತ್ತು ಎಂದು ಎಸ್‌ಐಟಿ ವರದಿ ತಿಳಿಸಿದೆ. ಮೂಲಗಳ ಪ್ರಕಾರ, 2024ರಲ್ಲಿ ದೇವಾಲಯ ಆರಂಭವಾದಾಗಿನಿಂದಲೇ ಈ ಜಾಲ ಸಕ್ರಿಯವಾಗಿತ್ತು. ಏಪ್ರಿಲ್ 27ರಿಂದ ಜೂನ್ 5ರವರೆಗೆ ನಡೆದ 70 ಕಳ್ಳತನದ ಘಟನೆಗಳು ಸಿಸಿಟಿವಿ ದೃಶ್ಯಾವಳಿಯಲ್ಲಿ ಪತ್ತೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿಯವರೆಗೆ ಸುಮಾರು ₹70 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ₹7ರಿಂದ ₹7.5 ಕೋಟಿ ಹಣ ನಾಪತ್ತೆಯಾಗಿರಬಹುದು ಎಂದು ವರದಿಗಳಿದ್ದರೂ, ಅಧಿಕೃತ ಲೆಕ್ಕ ಇನ್ನೂ ಪ್ರಕಟವಾಗಿಲ್ಲ. ಪ್ರಕರಣದಲ್ಲಿ ದೇಣಿಗೆ ಹಣ ಎಣಿಸುವ ಕಾರ್ಯದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಬಂಧಿಸಲಾಗಿದೆ. ಕೆಲವರು ಶಿಫಾರಸಿನ ಆಧಾರದ ಮೇಲೆ ಕೆಲಸ ಪಡೆದಿದ್ದು, ತಮ್ಮ ಸಂಬಂಧಿಕರನ್ನೂ ಇದೇ ತಂಡದಲ್ಲಿ ನೇಮಕ ಮಾಡಿಸಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಎಸ್‌ಐಟಿ ವರದಿಯಲ್ಲಿ ದೇವಾಲಯದ ಭದ್ರತಾ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳನ್ನು ಉಲ್ಲೇಖಿಸಲಾಗಿದೆ ;

* ಸಿಬ್ಬಂದಿಯನ್ನು ಕೆಲಸ ಮುಗಿಸಿ ಹೊರಡುವಾಗ ತಪಾಸಣೆ ನಡೆಸುತ್ತಿರಲಿಲ್ಲ.
* ಸಿಸಿಟಿವಿ ನಿಗಾ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ.
* ಹುಂಡಿಗಳ ದಾಖಲೆ ಮತ್ತು ಲೆಕ್ಕಪತ್ರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.
* ದೇಣಿಗೆ ಎಣಿಕೆ ಪ್ರಕ್ರಿಯೆಯ ಮೇಲ್ವಿಚಾರಣೆಯಲ್ಲಿ ಗಂಭೀರ ನಿರ್ಲಕ್ಷ್ಯ ನಡೆದಿದೆ.
* ಭಕ್ತರು ಅರ್ಪಿಸಿದ್ದ ಚಿನ್ನಾಭರಣಗಳಾದ ಕಿವಿಯೋಲೆ, ಮೂಗುತಿ, ಬಳೆ ಹಾಗೂ ಕಾಲುಂಗುರಗಳನ್ನೂ ಕಳವು ಮಾಡಿರುವ ಆರೋಪ ಕೇಳಿಬಂದಿದೆ.
* ಈ ಪ್ರಕರಣದ ಸಂಬಂಧ ಬ್ಯಾಂಕ್ ಅಧಿಕಾರಿಗಳ ಪಾತ್ರವೂ ತನಿಖೆಯ ವ್ಯಾಪ್ತಿಗೆ ಬಂದಿದ್ದು, ಇನ್ನಷ್ಟು ಮಂದಿಯ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Theft while counting donations: The inside story of the Ram temple scam exposed – ತುಳು ಟೈಮ್ಸ್

ದನ್ನೂ ಓದಿ : ಕರ್ನಾಟಕದಲ್ಲಿ 7 ದಿನ ಮಳೆಯ ಅಬ್ಬರ ; ಈ ಜಿಲ್ಲೆಗಳಿಗೆ ಭಾರೀ ಎಚ್ಚರಿಕೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtube.com/shorts/OMCY194x_LY?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page