ಬೆಂಗಳೂರು: Tulu Times l ರಾಜ್ಯದ ಕೆರೆ, ನದಿ, ಜಲಾಶಯ ಸೇರಿದಂತೆ ಸಾರ್ವಜನಿಕ ಜಲಮೂಲಗಳಿಗೆ ವೈದ್ಯಕೀಯ, ಜೈವಿಕ ಹಾಗೂ ಇತರೆ ಅಪಾಯಕಾರಿ ತ್ಯಾಜ್ಯಗಳನ್ನು ಸುರಿದು ಮಾಲಿನ್ಯ ಉಂಟುಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿದ ವೇಳೆ ಈ ನಿರ್ದೇಶನ ನೀಡಿದ್ದಾರೆ. ಪರಿಶೀಲನೆ ವೇಳೆ ಗ್ರಾಮದ ಕೆರೆಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯಲಾಗುತ್ತಿದೆ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು. ಇದರಿಂದ ಕೆರೆಯ ನೀರು ಕಲುಷಿತವಾಗಿದ್ದು, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರಕ್ಕೆ ಗಂಭೀರ ಅಪಾಯ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದರು.
ದೂರಿನ ಗಂಭೀರತೆಯನ್ನು ಮನಗಂಡ ಸಚಿವರು ತಕ್ಷಣವೇ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಮಗ್ರ ತನಿಖೆ ನಡೆಸಿ, ತ್ಯಾಜ್ಯ ಸುರಿದವರನ್ನು ಪತ್ತೆಹಚ್ಚುವಂತೆ ಸೂಚಿಸಿದರು. ಪರಿಶೀಲನೆ ವೇಳೆ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯಲ್ಲಿ ದೊಡ್ಡ ಪ್ರಮಾಣದ ಜೈವ ವೈದ್ಯಕೀಯ ತ್ಯಾಜ್ಯ ಪತ್ತೆಯಾಗಿದೆ. ಬಳಸಿದ ಸಿರಿಂಜ್‌ಗಳು, ಔಷಧ ಬಾಟಲಿಗಳು, ಬ್ಯಾಂಡೇಜ್‌ಗಳು, ಅವಧಿ ಮೀರಿದ ಔಷಧ ಕ್ಯಾಪ್ಸುಲ್‌ಗಳು, ಆಸ್ಪತ್ರೆ ಹಾಸಿಗೆಗಳ ವಸ್ತುಗಳು, ಕೈಗವಸುಗಳು ಹಾಗೂ ವೈಯಕ್ತಿಕ ಸುರಕ್ಷತಾ ಕಿಟ್‌ಗಳು ಸೇರಿದಂತೆ ಅಪಾಯಕಾರಿ ತ್ಯಾಜ್ಯಗಳು ಕಾಲುವೆ ಹಾಗೂ ಕೆರೆ ಸುತ್ತಮುತ್ತ ಬಿದ್ದಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಈ ಬೆಳವಣಿಗೆಯ ನಂತರ ವೈದ್ಯಕೀಯ, ಜೈವ ವೈದ್ಯಕೀಯ ಮತ್ತು ಇ-ತ್ಯಾಜ್ಯವನ್ನು ಜಲಮೂಲಗಳಿಗೆ ಸುರಿದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ, ಸಂಬಂಧಿತ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದ ಕೆರೆ, ನದಿ, ಜಲಾಶಯ ಸೇರಿದಂತೆ ಯಾವುದೇ ಜಲಮೂಲಗಳನ್ನು ಕಲುಷಿತಗೊಳಿಸುವವರನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ಗ್ರಾಮಸ್ಥರು ಸಲ್ಲಿಸಿದ ಇತರ ಸಾರ್ವಜನಿಕ ಸಮಸ್ಯೆಗಳ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.
Criminal case if medical waste is dumped into lakes – ತುಳುಟೈಮ್ಸ್
ಇದನ್ನೂ ಓದಿ :ಹಳೆಯ ಮೊಬೈಲ್ ಮಾರುವ ಮುನ್ನ ಎಚ್ಚರ : ಡೇಟಾ ಗೌಪ್ಯತೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/XCdALnNEiNM?feature=share











