ಔಷಧ : Tulu Times l ಆನ್‌ಲೈನ್ ಇ-ಕಾಮರ್ಸ್ ವೇದಿಕೆಗಳ ಮೂಲಕ ನಡೆಯುತ್ತಿರುವ ಅಕ್ರಮ ಔಷಧ ಸಂಗ್ರಹ ಹಾಗೂ ಮಾರಾಟ ಜಾಲಕ್ಕೆ ಬ್ರೇಕ್ ಹಾಕಲು ಕರ್ನಾಟಕ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ.
ಇತ್ತೀಚೆಗೆ ರಾಜ್ಯದ ವಿವಿಧೆಡೆ ದಾಳಿ ನಡೆಸಿದ ಎಫ್‌ಡಿಎ ಅಧಿಕಾರಿಗಳು, ಯಾವುದೇ ಧನದ ಪರವಾನಗಿ ಇಲ್ಲದೆ ಅಕ್ರಮವಾಗಿ ಔಷಧ ಸಂಗ್ರಹಿಸುತ್ತಿದ್ದ ಇ-ಕಾಮರ್ಸ್ ದಾಸ್ತಾನು ಘಟಕಗಳಿಂದ ಸುಮಾರು 4 ಲಕ್ಷಕ್ಕೂ ಅಧಿಕ ಮೌಲ್ಯದ ಔಷಧ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ತಪಾಸಣೆ ವೇಳೆ ಪ್ರಮುಖ ಎರಡು ದೊಡ್ಡ ಸಂಗ್ರಹಣಾ ಘಟಕಗಳಲ್ಲಿ ಯಾವುದೇ ಕಾನೂನುಬದ್ಧ ಲೈಸೆನ್ಸ್ ಇರದಿರುವುದು ಪತ್ತೆಯಾಗಿದೆ.
ದಾಳಿಯ ಸಂದರ್ಭದಲ್ಲಿ ಕಾಲಾವಧಿ ಮುಗಿದ ಔಷಧಗಳ ದಾಸ್ತಾನು, ಸರಿಯಾದ ಲೇಬಲ್ ಇಲ್ಲದಿರುವುದು, ನಿಗದಿತ ಗರಿಷ್ಠ ಚಿಲ್ಲರೆ ಬೆಲೆಗಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ದೂರುಗಳು ಹಾಗೂ ನಿಯಮಬಾಹಿರವಾಗಿ ವೈದ್ಯರ ಚೀಟಿ ಇಲ್ಲದೆ ಔಷಧ ಸರಬರಾಜು ಮಾಡುತ್ತಿರುವ ಗಂಭೀರ ಲೋಪಗಳು ಕಂಡುಬಂದಿವೆ.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಆನ್‌ಲೈನ್ ಔಷಧ ಮಾರಾಟ ವೇದಿಕೆಗಳಿಗೆ ಕಠಿಣ ನಿಯಮಾವಳಿ ರೂಪಿಸುವ ಸಂಬಂಧ ಸೆಪ್ಟೆಂಬರ್ 8ರಂದು ಉನ್ನತ ಮಟ್ಟದ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಎಫ್‌ಡಿಎ ಕಮಿಷನರ್ ಹಾಗೂ ಕಾನೂನು ತಜ್ಞರು ಭಾಗವಹಿಸಲಿದ್ದಾರೆ.
ಆನ್‌ಲೈನ್ ವೇದಿಕೆಗಳ ಮನಸೋಇಚ್ಛೆ ಮಾರಾಟಕ್ಕೆ ಕಡಿವಾಣ ಹಾಕುವುದು, ಕಡ್ಡಾಯ ಲೈಸೆನ್ಸ್ ವ್ಯವಸ್ಥೆ ಜಾರಿಗೊಳಿಸುವುದು, ಪ್ರತಿಯೊಂದು ಆನ್‌ಲೈನ್ ಆರ್ಡರ್‌ಗೂ ನೈಜ ಪ್ರಿಸ್ಕ್ರಿಪ್ಷನ್ ಕಡ್ಡಾಯಗೊಳಿಸುವುದು ಹಾಗೂ ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕುರಿತು ಸಭೆಯಲ್ಲಿ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಸ್ಪಷ್ಟ ನಿಯಮ ರೂಪಿಸಲು ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
Online stocking of medicines without a license: FDA takes strict action – ತುಳುಟೈಮ್ಸ್
ಇದನ್ನೂ ಓದಿ :ಕನ್ನಡನಾಡಿನ ಈ ಮನೆಯಲ್ಲಿ 37 ವರ್ಷಗಳಿಂದ ಸಂಸ್ಕೃತವೇ ಮಾತೃಭಾಷೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtube.com/shorts/GzXRNLIiLws?feature=share











